ಡೈಲಿ ವಾರ್ತೆ:16 ಆಗಸ್ಟ್ 2023
ಸೇತುವೆ ನಿರ್ಮಿಸಿಕೊಡಿ ಪ್ಲೀಸ್: ಪ್ರಧಾನಿ ಮೋದಿಗೆ ಮಕ್ಕಳ ಪತ್ರ
ಹಾವೇರಿ: ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದಿವೆ. ಆದರೆ ಇವತ್ತಿಗೂ ಕೆಲವು ಗ್ರಾಮಗಳಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಸಮಸ್ಯೆ ಕಂಡು ಗ್ರಾಮದ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಸೇತುವೆ ನಿರ್ಮಾಣ ಮಾಡಿ ಮೋದಿಜಿ ಎಂದು ಮನವಿ ಮಾಡಿದ್ದಾರೆ.
ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ. ತೆಪ್ಪ ಹತ್ತಿ ನದಿ ದಾಟುತ್ತಿರುವ ಜನ. ತೆಪ್ಪಕ್ಕಾಗಿ ಕಾದು ಕೂತಿರುವ ಜನ. ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಹಾವೇರಿ ತಾಲೂಕಿನ ಶಾಕಾರ ಗ್ರಾಮದಲ್ಲಿ. ಹಂಸಿ ಮತ್ತು ಶಾಕಾರ ಗ್ರಾಮ ಹಾವೇರಿ ಜಿಲ್ಲೆಯ ಕಟ್ಟಕಡೆಯ ಗ್ರಾಮಗಳು.
ಈ ಗ್ರಾಮದಲ್ಲಿ ಸೂಕ್ತ ವೈದಕೀಯ, ಶಿಕ್ಷಣ ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲ. ಪ್ರತಿ ಚಿಕ್ಕ ಚಿಕ್ಕ ಕೆಲಸಕ್ಕೂ ನದಿ ಆಚೆಯ ಹಾವನೂರು ಗ್ರಾಮಕ್ಕೆ ಹೋಗಬೇಕು. ಈ ಗ್ರಾಮದ ಚಿಕ್ಕ ಮಕ್ಕಳಿಂದ ವಯೋವೃದ್ಧರು ಹಾಗೂ ಬಾಣಂತಿಯರು, ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಬೇಕಾದರೆ ಮೊದಲು ತೆಪ್ಪ ಹತ್ತಬೇಕು. ಅಷ್ಟೇ ಅಲ್ಲ ಶಾಲಾ ಕಾಲೇಜ್‌ಗೂ ತೆಪ್ಪವೇ ಗತಿ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
4 ದಶಕಗಳಿಂದ ತೆಪ್ಪ ನಂಬಿ ಜೀವನ ಸಾಗಿಸುತ್ತಿರುವ ಶಾಕಾರ ಗ್ರಾಮದ ಜನ, ಸೇತುವೆ ನಿರ್ಮಾಣ ಮಾಡಿ ಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಆಶ್ವಾಸನೆಗೆ ಸೀಮಿತವಾಗಿ ಚುನಾವಣೆ ಕಳೆಯುತ್ತಿದೆ. ಆದರೆ ಗ್ರಾಮಸ್ಥರ ಸಮಸ್ಯೆಗೆ ಮಾತ್ರ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೇರವಾಗಿ ನರೇಂದ್ರ ಮೋದಿವರಿಗೆ ಪತ್ರ ಬರೆಯುವುದರ ಮೂಲಕ ದಶಕಗಳ ಸಮಸ್ಯೆಗೆ ಪರಿಹಾರ ಕೋರಿ ಮನವಿ ಮಾಡಿದ್ದಾರೆ.
ಹಂಸಿ ಮತ್ತು ಶಾಕಾರ ಗ್ರಾಮದ ಸಮಸ್ಯೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಸಿಗದ ಪರಿಹಾರ, ಪ್ರಧಾನಿ ಮೋದಿಯವರಿಂದ ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸದಿಂದ ಈ ಪುಟ್ಟ ಮಕ್ಕಳು ಪತ್ರದ ಮುಖೇನ ಮಾಡಿದ ಮನವಿಗೆ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ.