ಡೈಲಿ ವಾರ್ತೆ:16 ಆಗಸ್ಟ್ 2023

ನೆಲ್ಯಾಡಿ: ವ್ಯಕ್ತಿ ನಾಪತ್ತೆ – ಗುಂಡ್ಯ ಹೊಳೆಗೆ ಬಿದ್ದಿರುವ ಶಂಕೆ, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ!

ನೆಲ್ಯಾಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್‌ ಹೊಳೆಬದಿ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಹೊಳೆಗೆ ಬಿದ್ದಿರುವುದಾಗಿ ಶಂಕಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹೊಳೆ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ.

ಉದನೆ ಸಮೀಪದ ರೆಖ್ಯ ಗ್ರಾಮದ ವ್ಯಕ್ತಿಯೊಬ್ಬರು ಆ.14ರ ಸಂಜೆಯಿಂದ ನಾಪತ್ತೆಯಾಗಿದ್ದು ಅವರ ಬೈಕ್ ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ಗುಂಡ್ಯ ಹೊಳೆಬದಿ ಹೆದ್ದಾರಿಯಲ್ಲಿ ಪತ್ತೆಯಾಗಿದೆ.

ಊರ್ನಡ್ಕದ ನಿವಾಸಿ ಲೋಕೇಶ್(43) ಎಂಬವರು ನಾಪತ್ತೆಯಾದವರು. ಗುಂಡ್ಯಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ನೆಲೆಯಲ್ಲಿ ಆ.15ರಂದು ಹೊಳೆನೀರಿನಲ್ಲಿ ಹುಡುಕಾಟ ನಡೆಸಲಾಗಿದೆ.
ಆ.14ರಂದು ಸಂಜೆ 4 ಗಂಟೆಗೆ ಅಗತ್ಯ ಸಾಮಾಗ್ರಿ ಖರೀದಿಗೆಂದು ಮನೆಯಿಂದ ತನ್ನ ಬೈಕ್ ನಲ್ಲಿ ಉದನೆ ಪೇಟೆಗೆಂದು ಹೋಗಿದ್ದರು. ಲೋಕೇಶ್ ಅವರ ಅಣ್ಣ ನೆಲ್ಯಾಡಿಗೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ತಮ್ಮನ ಬೈಕ್ ಉದನೆ ಸಮೀಪ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಂತುಕೊಂಡಿರುವುದ್ದನ್ನು ನೋಡಿದ್ದರು ಎನ್ನಲಾಗಿದೆ . ಮನೆ ಕೆಲಸ ನಿರ್ವಹಿಸಿ ಡೈರಿಗೆ ಹಾಲು ನೀಡಿ ಬರುವವರೆಗೂ ಲೋಕೇಶ್ ಅವರ ಬೈಕ್ ಅಲ್ಲೇ ನಿಂತಿತ್ತು. ಈ ವೇಳೆ ತಮ್ಮನ ಮೊಬೈಲ್‌ಗೆ ಕರೆ ಮಾಡಿದಾಗ ತಮ್ಮನ ಪತ್ನಿ ಕೆರೆ ಸ್ವೀಕರಿಸಿ ಮೊಬೈಲ್ ಮನೆಯಲ್ಲಿಯೇ ಇಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ.

ಲೋಕೇಶ್ ಅವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಅಣ್ಣ ರಾಮಚಂದ್ರ ಗೌಡ ಹಾಗೂ ಇತರರು ಬೈಕ್ ಇದ್ದ ಅಸುಪಾಸಿನಲ್ಲಿ ಗುಂಡ್ಯ ನದಿ ಕಿನಾರೆಯ ಬಳಿ, ನೆರೆಕರೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಗುಂಡ್ಯ ಹೊಳೆಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಆ.15ರಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹೊಳೆ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ನೆಲ್ಯಾಡಿ ಹೊರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.