ಡೈಲಿ ವಾರ್ತೆ:16 ಆಗಸ್ಟ್ 2023
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಧ್ಯಕ್ಷ ಕಾಂಗ್ರೆಸ್ ಗೆ ಸೇರ್ಪಡೆ – ದ್ವಿತೀಯ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತರು.
ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ದ್ವಿತೀಯ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಮಿತಾ ಡಿ. ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಚ್ಚಿದಾನಂದ (ಸತೀಶ್) ಪೂಜಾರಿ ಆಯ್ಕೆಯಾಗಿದ್ದಾರೆ.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಒಟ್ಟು 11 ಸದಸ್ಯ ಬಲ ಹೊಂದಿದ್ದು, ಈ ಪೈಕಿ 5 ಮಂದಿ ಕಾಂಗ್ರೆಸ್ ಬೆಂಬಲಿತ, 5 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮತ್ತು ಓರ್ವ ಪಕ್ಷೇತರ ಅಭ್ಯರ್ಥಿ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪಂಚಾಯತ್ ನ ಪ್ರಥಮ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಸಂದರ್ಭ ಪಕ್ಷೇತರ ಅಭ್ಯರ್ಥಿ ಸಚ್ಚಿದಾನಂದ (ಸತೀಶ್) ಪೂಜಾರಿ ಬಿಜೆಪಿಗೆ ಸೇರ್ಪಡೆಗೊಂಡು 1 ಮತದ ಅಂತರದಲ್ಲಿ ಸತೀಶ್ ಪೂಜಾರಿಯೇ ಅಧ್ಯಕ್ಷರಾಗಿ ಮತ್ತು ಶಕೀಲ ಕೆ. ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ದ್ವಿತೀಯ ಅವಧಿಗೆ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಪಾಲಾಗಿದೆ.
ಇದೀಗ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭ ಹಾಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಸತೀಶ್ ಪೂಜಾರಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಸದಸ್ಯ ಬಲ 5 ರಿಂದ 6 ಕ್ಕೆ ಏರಿಕೆ, ಬಿಜೆಪಿ 6 ರಿಂದ 5 ಇಳಿಕೆಯಾಗಿದೆ .
ಕಾಂಗ್ರೆಸ್ ಬೆಂಬಲಿತ ಸಮಿತಾ ಡಿ.ಪೂಜಾರಿ ಅಧ್ಯಕ್ಷರಾಗಿ ಮತ್ತು ಸತೀಶ್ ಪೂಜಾರಿಯೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಕಾರ್ಯ ನಿರ್ವಹಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಸಹಕರಿಸಿದರು.
ಅಭಿನಂದನೆ.
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೆ. ನಿರಂಜನ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಶನ್ ರೈ, ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀಧರ್ ರೈ ಕುರ್ಲೆತ್ತಿಮಾರು, ಅನಂತಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ಬಾಸ್ ನೇರಳಕಟ್ಟೆ, ಬೂತ್ ಅಧ್ಯಕ್ಷರುಗಳಾದ ಪ್ರಕಾಶ್ ರೈ ಕುರ್ಲೆತ್ತಿಮಾರು, ದೇರಣ್ಣ ಪೂಜಾರಿ, ನೇರಳಕಟ್ಟೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎನ್.ಕೆ.ಅಬೂಬಕ್ಕರ್, ಸದಸ್ಯರಾದ ಹಮೀದ್ ಪರ್ಲೊಟ್ಟು, ರಶೀದ್ ಪರ್ಲೊಟ್ಟು, ಪ್ರಮುಖರಾದ ಎನ್.ಕೆ.ಕಾಸಿಂ, ರಾಮಚಂದ್ರ ಶೆಟ್ಟಿ ಕೊಡಂಗೆಮಾರ್, ದರ್ಬಾರ್ ಅಬ್ದುಲ್ ಖಾದರ್, ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ನಾರಾಯಣ ಗೌಡ ಮೀನಾವು, ಅತಾವುಲ್ಲಾ ನೇರಳಕಟ್ಟೆ , ಮನ್ಸೂರ್ ನೇರಳಕಟ್ಟೆ, ಸಲೀಂ ಸ್ಟಾರ್ ಮಾಣಿ ಮೊದಲಾದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.