ಡೈಲಿ ವಾರ್ತೆ:17 ಆಗಸ್ಟ್ 2023
ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿಕ್ಕಿ ನಾಲ್ವರು ಪ್ರಯಾಣಿಕರನ್ನು ಕೊಂದಿದ್ದ ರೈಲ್ವೆ ಪೊಲೀಸ್ ನ್ನು ಸೇವಯಿಂದಲೇ ವಜಾ!
ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಓರ್ವ ಹಿರಿಯ ಸಹೋದ್ಯೋಗಿ ಮತ್ತು ಮೂವರು ಪ್ರಯಾಣಿಕರಿಗೆ ಗುಂಡಿಕ್ಕಿದ್ದ ರೈಲ್ವೆ ಪೊಲಿಸ್ ಪಡೆ(ಆರ್ಪಿಎಫ್)ಯ ಕಾನ್ಸ್ಟೆಬಲ್ ಚೇತನ್ ಸಿಂಗ್ ಚೌಧರಿಯನ್ನು ಸೇವೆಯಿಂದಲೇ ಶಾಶ್ವತವಾಗಿ ವಜಾಗೊಳಿಸಲಾಗಿದೆ.
ಜುಲೈ 31ರಂದು ಜೈಪುರ-ಮುಂಬೈ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿತ್ತು. ಆಗಸ್ಟ್ 14ರಂದೇ ಚೌಧರಿಯನ್ನು ಸೇವೆಯಿಂದ ವಜಾಗೊಳಿಸಿ ಮುಂಬೈ ಕೇಂದ್ರದ ಆರ್ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಆರೋಪಿ ಚೌಧರಿ ಮೇಲಧಿಕಾರಿಯಾದ ಎಎಸ್‌ಐ ಟಿಕಾರಾಂ ಮೀನಾ ಮತ್ತು ಇತರ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದು ಹೇಗೆ ಎಂಬುದರ ಕುರಿತು ನ್ಯಾಯಾಲಯದ ಅವಲೋಕನದ ನಂತರ ಆರ್ಪಿಎಫ್ ಇಲಾಖೆಯಿಂದ ಈ ನಿರ್ಧಾರವು ಬಂದಿದೆ. ಪ್ರಸ್ತುತ ಆರೋಪಿ ಚೌಧರಿ ಜೈಲಿನಲ್ಲಿ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾನೆ
ಜುಲೈ 31ರಂದು ಆರೋಪಿ ಚೌಧರಿ ರೈಲಿನಲ್ಲಿ ಫೈರಿಂಗ್ ಮಾಡಿದ್ದಲ್ಲದೆ, ರೈಲಿನ ಪ್ಯಾಂಟ್ರಿ ಕಾರ್ ಬಳಿ ತೆರಳಿ ಮತ್ತೊಬ್ಬ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ, ಚೌಧರಿ ಎಸ್6 ಕೋಚ್‌ಗೆ ತೆರಳಿ ಮೂರನೇ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್, ಮುಹಮ್ಮದ್ ಹುಸೇನ್ ಭನ್ಪುರವಾಲ, ಸಯ್ಯದ್ ಸೈಫುದ್ದೀನ್ ಹಾಗೂ ಅಸ್ಗರ್ ಅಬ್ಬಾಸ್ ಶೇಖ್ ಅವರು ರೈಲಿನ ವಿವಿಧ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು.
ಹತ್ಯೆ ಮಾಡಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆಯ ಸಮಯದಲ್ಲಿ ಬೊರಿವಲಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿದರು ಮತ್ತು ಅದೇ ರೈಲಿನಲ್ಲಿ ಚೇತನ್ ಸಿಂಗ್ ಅವರನ್ನು ಕರೆತಂದು ಘಟನೆಯನ್ನು ಮರುಸೃಷ್ಟಿ ಮಾಡಿದರು.