ಡೈಲಿ ವಾರ್ತೆ:17 ಆಗಸ್ಟ್ 2023

ಕಾರ್ಕಳ: ಶಾಲೆಯ ಎದುರೇ ತೆರೆದ ಬಾರ್ – ವಿದ್ಯಾರ್ಥಿಗಳಿಂದ ಪ್ರತಿಭಟನೆ!

ಕಾರ್ಕಳ: ಶಾಲಾ ಆವರಣದಲ್ಲಿ ಸುತ್ತಮುತ್ತ ಯಾವುದೇ ರೀತಿಯ ಮದ್ಯಪಾನ ಅಥವಾ ಧೂಮಪಾನ ಸೇರಿದಂತೆ ಮಾದಕ ವಸ್ತು ಸೇವನೆಗೆ ಅಥವಾ ಮಾರಾಟಕ್ಕೆ ಸರ್ಕಾರವು ನಿರ್ಬಂಧ ವಿಧಿಸಿದೆ ಆದರೆ ಇದೀಗ ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಬಾರ್‌ಗೆ ಅನುಮತಿ ನೀಡಿದ್ದು, ಅಧಿಕಾರಿಗಳ ನಡೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಬಜಗೋಳಿ- ಹೊಸ್ಮಾರು ರಾಜ್ಯ ಹೆದ್ದಾರಿಯ ಎಡಬದಿಯಲ್ಲಿ ವಿದ್ಯಾ ಸಂಸ್ಥೆ ಇದ್ದು, ರಸ್ತೆಯ ಬಲಭಾಗದಲ್ಲಿ ನಿರ್ಮಾಣವಾದ ನೂತನ ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯುವುದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇಲಾಖೆಯಿಂದಲೂ ಅದಕ್ಕೆ ಅನುಮತಿ ಲಭಿಸಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹೆತ್ತವರು, ಊರ ಪ್ರಜ್ಞಾವಂತ ನಾಗರಿಕರು ಹಾಗೂ ಶಿಕ್ಷಕ ವರ್ಗದವರು ಇಲಾಖೆಯ ಕ್ರಮವನ್ನು ಖಂಡಿಸಿ ಹೋರಾಟದ ನಡೆಸುತ್ತಿದ್ದಾರೆ.

ಇನ್ನು ಮಾಹಿತಿ ಪ್ರಕಾರ‌ ಶಿಕ್ಷಣ ಸಂಸ್ಥೆಯ ಅನತಿ‌ ದೂರದಲ್ಲಿ ಬಾರ್ ಎಂಡ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಸಭೆಯನ್ನು ಆಯೋಜಿಸಿ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಅದರಂತೆ ಆಗಸ್ಟ್ 15ರಂದು ಶಾಲಾ ಎದುರಿನಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಮುಂದಿಟ್ಟು ಪುಟಾಣಿ ವಿದ್ಯಾರ್ಥಿಗಳು ಭಿತ್ತಿಪತ್ರ ಹಿಡಿದು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಬಜಗೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ತುಡಾರ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್ ಆರಂಭಿಸಲಾಗುತ್ತಿರುವ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಸೇರಿ ಬಾರ್ ಹಾಗೂ ರೆಸ್ಟೋರೆಂಟ್ ಗೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಆಕ್ಷೇಪ ಸಲ್ಲಿಸಿ ಜಿಲ್ಲಾಡಳಿತಕ್ಕೂ ದೂರು ಸಲ್ಲಿಸಿದ್ದಾರೆ.

ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಏಕಾಏಕಿ ಅನುಮತಿ ನೀಡಿದ್ದು ಇನ್ನು ಕೆಲವು ದಿನಗಳಲ್ಲಿ ಪ್ರಾರಂಭ ವಾಗಲಿದ್ದು ಕೂಡಲೇ ಅದನ್ನು ನಿಲ್ಲಿಸಬೇಕು ಹಾಗೂ ಪರವಾನಿಗೆ ಅನುಮತಿ ರದ್ದುಪಡಿಸಬೇಕು ಎಂದು ಪೋಷಕರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.