ಡೈಲಿ ವಾರ್ತೆ:25 ಆಗಸ್ಟ್ 2023
ಕಳೆದುಕೊಂಡ ದುಬಾರಿ ಬೆಲೆಯ ಚಿನ್ನದ ಸರವನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿಸಿ ನಂಬಿಕೆ ಉಳಿಸಿಕೊಂಡ ಸೆಕ್ಯೂರಿಟಿ!
ಬೆಂಗಳೂರು: ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ದುಬಾರಿ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಬೆಲೆ ಬಾಳುವ ವಸ್ತುವನ್ನು ಪತ್ತೆ ಹಚ್ಚಿದ ಹೋಟೆಲ್ ಸೆಕ್ಯೂರಿಟಿ, ಅದನ್ನು ಮಹಿಳೆಗೆ ಹಿಂತಿರುಗಿಸುವ ಮುಖೇನ ತಮ್ಮ ಪ್ರಾಮಾಣಿಕತೆಯನ್ನು ಮೆರೆದ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ವರದಿಯಾಗಿದೆ.
ಘಟನೆಯ ವಿವರ: ಆಗಸ್ಟ್ 23 ರಂದು ಕದಂಬ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಮ್ಮ ದುಬಾರಿ ಬೆಲೆಯ ಬಂಗಾರದ ಸರವನ್ನು ಕಳೆದುಕೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹಿಂತಿರುಗುವ ವೇಳೆ ತಾವು ಧರಿಸಿದ್ದ ಚಿನ್ನದ ಒಡವೆ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಮಹಿಳೆಯನ್ನು ಕಸ್ತೂರಿ ಎಂದು ಹೇಳಲಾಗಿದ್ದು, ತಮ್ಮ ಪತಿಯೊಡನೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಕೆಲ ಕಾಲ ಹುಡುಕಾಟ ನಡೆಸಿದ್ದಾರೆ. ಸುಮಾರು ಐದು ಲಕ್ಷ ರೂ. ಬೆಲೆ ಬಾಳುವ 110 ಗ್ರಾಂ ಚಿನ್ನದ ನೆಕ್ಲೇಸ್ ಕಳೆದುಕೊಂಡಿದ್ದ ಕಸ್ತೂರಿ, ಸರ ನಾಪತ್ತೆಯಾದ ಬೆನ್ನಲ್ಲೇ ಬಹಳ ಕಂಗಲಾಗಿದ್ದರು. ಕೂಡಲೇ ಹೋಟೆಲ್ ಮ್ಯಾನೇಜ್ಮೆಂಟ್ಗೆ ಕರೆ ಮಾಡಿ ವಿಷಯ ಮುಟ್ಟಿಸಿದ ದಂಪತಿಗೆ ಅಚ್ಚರಿಯೊಂದು ಕಾದಿತ್ತು.
ದಂಪತಿ ಕರೆ ಮಾಡುವ ಮುನ್ನವೇ ಹೋಟೆಲ್ ಮ್ಯಾನೇಜ್ಮೆಂಟ್ ಅವರಿಗೆ ಸೆಕ್ಯೂರಿಟಿ ಗಾರ್ಡ್ ವ್ಯಕ್ತಿಯೊಬ್ಬರು, ಮಹಿಳೆಯ ಚಿನ್ನದ ಸರವನ್ನು ತಲುಪಿಸಿದ್ದರು. ನೆಕ್ಲೇಸ್ನ ಗುರುತನ್ನು ಸ್ಪಷ್ಟಪಡಿಸಿಕೊಂಡ ನಂತರವೇ ಮಹಿಳೆಗೆ ತಮ್ಮ ಬೆಲೆಬಾಳುವ ವಸ್ತುವನ್ನು ಹೋಟೆಲ್ ಸಿಬ್ಬಂದಿ ಹಿಂತಿರುಗಿಸಿದ್ದಾರೆ.
ಖಾಸಾಗಿ ಹೋಟೆಲ್ ಸೆಕ್ಯೂರಿಟಿಯಿಂದ ಪ್ರಾಮಾಣಿಕ ಕೆಲಸಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ, ಶ್ಲಾಘನೆ ವ್ಯಕ್ತವಾಗಿದೆ. ಮರುದಿನ ಸೆಕ್ಯೂರಿಟಿ ಸಮ್ಮುಖದಲ್ಲಿ ಮಹಿಳೆಗೆ ದುಬಾರಿಯ ನೆಕ್ಲೇಸ್ ಅನ್ನು ಹೋಟೆಲ್ ಮಾಲೀಕರಾದ ಗೋಪಾಲಕೃಷ್ಣ ಹಸ್ತಾಂತರಿಸಿದ್ದಾರೆ.