ಡೈಲಿ ವಾರ್ತೆ:26 ಆಗಸ್ಟ್ 2023

ತರಗತಿಯಲ್ಲೇ ಮಕ್ಕಳಿಂದ ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಹೊಡೆಸಿದ ಶಿಕ್ಷಕಿ

ಉತ್ತರ ಪ್ರದೇಶ: ಮುಜಾಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರು ಅಲ್ಪಸಂಖ್ಯಾತ ಸಮುದಾಯದ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ಇನ್ನೋರ್ವ ವಿದ್ಯಾರ್ಥಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಘಟನೆಯನ್ನು ಖಂಡಿಸಿದ್ದಾರೆ.

ಇಲ್ಲಿನ ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ತೃಪ್ತಿ ತ್ಯಾಗಿ ಎಂಬ ಶಿಕ್ಷಕಿ 2ನೇ ತರಗತಿ ವಿದ್ಯಾರ್ಥಿಗೆ ಹೊಡೆಯಲು ಇನ್ನೋರ್ವ ವಿದ್ಯಾರ್ಥಿಗೆ ಹೇಳುತ್ತಿರುವುದನ್ನು ಕಾಣಬಹುದು.

ಘಟನೆಯ ಬಗ್ಗೆ ಮಾಹಿತಿ ಪಡೆದ ವೃತ್ತಾಧಿಕಾರಿ ರವಿಶಂಕರ್ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ವೈರಲ್ ವಿಡಿಯೋವನ್ನು ಪರಿಶೀಲಿಸಲಾಗಿದೆ. ಶಾಲಾ ಕೆಲಸವನ್ನು ಪೂರ್ಣಗೊಳಿಸದ ಕಾರಣಕ್ಕೆ ಮಗುವಿಗೆ ಹೊಡೆಯಲು ಹೇಳಲಾಗಿದೆ ಎಂದು ತೋರುತ್ತದೆ. ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಸಹ ವಿಡಿಯೋದಲ್ಲಿ ಕೇಳಬಹುದು. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

”ವಿದ್ಯಾರ್ಥಿಗಳ ಹೊರತಾಗಿ ಇಬ್ಬರು ವ್ಯಕ್ತಿಗಳು ಸಹ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಶಿಕ್ಷಕರು, ಇನ್ನೊಬ್ಬ ವ್ಯಕ್ತಿಯ ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಇಬ್ಬರು ವ್ಯಕ್ತಿಗಳ ವಿರುದ್ಧ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇದು ತನಿಖೆಯ ವಿಷಯವಾಗಿರುವುದರಿಂದ ನಾವು ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಿಲ್ಲ. ನಮ್ಮ ತಂಡವು ಇದನ್ನು ತನಿಖೆ ಮಾಡುತ್ತದೆ” ಎಂದು ಅಧಿಕಾರಿ ಶುಭಂ ಶುಕ್ಲಾ ಹೇಳಿದ್ದಾರೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷವನ್ನು ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯನ್ನಾಗಿ ಮಾಡುವುದಾಗಲಿ ಸರಿಯಲ್ಲ. ಮಕ್ಕಳು ಭಾರತದ ಭವಿಷ್ಯ ಅವರನ್ನು ದ್ವೇಷಿಸಬೇಡಿ, ನಾವೆಲ್ಲರೂ ಒಟ್ಟಾಗಿ ಪ್ರೀತಿಯನ್ನು ಕಲಿಸಬೇಕಾಗಿದೆ” ಎಂದು ಹೇಳಿದರು.