ಡೈಲಿ ವಾರ್ತೆ:30 ಆಗಸ್ಟ್ 2023

ಕೋಟೇಶ್ವರ : ಸೌರಋಗುಪಾಕರ್ಮ ಆಚರಣೆ

ಕುಂದಾಪುರ : ಕೋಟೇಶ್ವರ ಮತ್ತು ಹೊದ್ರಾಳಿ ಗ್ರಾಮಸ್ಥರಿಂದ ಹೊದ್ರಾಳಿಯ ಶ್ರೀ ಬಿದ್ದಿನ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ಉಪಾಕರ್ಮ ಕಾರ್ಯಕ್ರಮವು ಮಂಗಳವಾರ ನಡೆಯಿತು.

ವೇದಮೂರ್ತಿ ಕುಂಭಾಸಿ ನಾಗರಾಜ ಭಟ್ ಉತ್ಸರ್ಜನ ಉಪಾಕರ್ಮ ಹೋಮ ನಡೆಸಿ ವಿಧಿ ವಿಧಾನಗಳನ್ನು ನೆರವೇರಿಸಿದರು. ಉಪಾಕರ್ಮದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಗೃಹಸ್ಥರು, ವಟುಗಳು ಪಾಲ್ಗೊಂಡಿದ್ದು, ನೂತನ ಯಜ್ನೋಪವೀತವನ್ನು ಧಾರಣೆ ಮಾಡಿದರು. ಶ್ರೀ ಬಿದ್ದಿನ ಲಕ್ಷ್ಮೀ ಜನಾರ್ದನ ದೇವಳದ ಅರ್ಚಕ ವೇದಮೂರ್ತಿ ಕೃಷ್ಣಮೂರ್ತಿ ಭಟ್, ಕೋಟೇಶ್ವರ ಶ್ರೀ ಮುಖ್ಯಪ್ರಾಣ ದೇವಳದ ಅರ್ಚಕ ವೇದಮೂರ್ತಿ ಹರಿದಾಸ ಆಚಾರ್ಯ, ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇವಳದ ಪ್ರಧಾನ ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್ ಇನ್ನಿತರರು ಪಾಲ್ಗೊಂಡಿದ್ದರು.

ಮೊಳಹಳ್ಳಿ ಗ್ರಾಮದ ವಳತ್ತೂರು (ಕಂಚಾರ್ತಿ) ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವೇದಮೂರ್ತಿ ಗುಡ್ಡಟ್ಟು ಚಂದ್ರಶೇಖರ ಅಡಿಗರ ಆಚಾರ್ಯತ್ವ, ದೇವಳದ ಆಡಳಿತ ಧರ್ಮದರ್ಶಿ ಕೆ. ರಾಜಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸೌರಋಗುಪಾಕರ್ಮ ನಡೆಯಿತು. ನೂತನ ವಟುಗಳು, ಬ್ರಹ್ಮಚಾರಿಗಳು ಹಾಗೂ ವಿಪ್ರರು ನೂತನ ಯಜ್ನೋಪವೀತ ಧಾರಣೆ ಮಾಡಿದರು. ದ್ರಾವಿಡ ಬ್ರಾಹ್ಮಣ ಪರಿಷತ್ ಗುಡ್ಡಟ್ಟು ವಲಯಾಧ್ಯಕ್ಷ ಮೊಳಹಳ್ಳಿ ಸುಬ್ರಹ್ಮಣ್ಯ ಉಡುಪ, ಗೌರವಾಧ್ಯಕ್ಷ ನಾಗರಾಜ ಮಂಜ, ವೇದಮೂರ್ತಿಗಳಾದ ವಿನಾಯಕ ಅಡಿಗ ಗುಡ್ಡಟ್ಟು, ಗಣಪತಿ ಭಟ್ ಬೆದ್ರಾಡಿ, ಮಂಜುನಾಥ ಬಾಯಿರಿ, ನಾಗೇಶ್ವರ ಅಡಿಗ ಕೋಣಿ, ಮಾಧವ ಬಾಯಿರಿ ಹೊಂಬಾಡಿ, ರಾಘವೇಂದ್ರ ಉಡುಪ ಇನ್ನಿತರರು ಇದ್ದರು.