ಡೈಲಿ ವಾರ್ತೆ:30 ಆಗಸ್ಟ್ 2023
ಕೋಟೇಶ್ವರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ: ಗೀತಾ ಪಠಣದಂತೆಯೇ ಅನುಕರಣವೂ ಆಗಬೇಕು – ವಾದಿರಾಜ ಹೆಬ್ಬಾರ್
ಕುಂದಾಪುರ : ಭಗವದ್ಗೀತೆ ಉತ್ತಮ ಜೀವನ ಪಥವನ್ನು ತೋರುವ ಒಂದು ಉದ್ಗ್ರಂಥ. ಇದರಲ್ಲಿ ಸ್ವಯಂ ಭಗವಂತನೇ ತನ್ನ ಮಾತುಗಳಲ್ಲಿ ಮಾನವ ಜೀವನದ ಗುರಿಗಳನ್ನು ನಿರ್ದೇಶಿಸಿದ್ದಾನೆ. ಶ್ರೀ ಕೃಷ್ಣ ಉತ್ತಮ ನೀತಿ ಬೋಧಕ ಹಾಗೆಯೇ ಚಾಣಾಕ್ಷ ಮುತ್ಸದ್ದಿಯೂ ಹೌದು. ಆತನ ಈ ನೀತಿಬೋಧನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅರ್ಥ ಬರುತ್ತದೆ – ಎಂದು ದ್ರಾವಿಡ ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಹೇಳಿದರು.
ಮಿತ್ರದಳ ಕೋಟೇಶ್ವರ ಚಾರಿಟೇಬಲ್ ಟ್ರಸ್ಟ್ ಮತ್ತು ಮಿತ್ರದಳ ಕೋಟೇಶ್ವರ ಸಂಯುಕ್ತಾಶ್ರಯದಲ್ಲಿ ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರಿಸಿ ಮಾತನಾಡಿದ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಎಚ್. ಶ್ರೀನಿವಾಸಮೂರ್ತಿ, ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದಕ್ಕಿಂತ ಸ್ಪರ್ಧಾ ಮನೋಭಾವ ಹೊಂದುವುದು ಮುಖ್ಯ. ಜೀವನದ ಯಶಸ್ಸಿಗೆ ಇದು ಅಗತ್ಯ ಎಂದರು. ವಿಜೇತರನ್ನು ಅಭಿನಂದಿಸಿದ ಅವರು, ಪುಟಾಣಿ ಕೃಷ್ಣ ವೇಷ ತೊಟ್ಟ ಎಲ್ಲ ಪುಟಾಣಿಗಳಿಗೂ ಮಾತೆಯರು ಶ್ರೀ ಕೃಷ್ಣನ ಆದರ್ಶ, ಜೀವನ ಸಂದೇಶಗಳನ್ನು ಪರಿಚಯಿಸಬೇಕು ಎಂದು ಸಲಹೆ ಮಾಡಿದರು.
ಮಿತ್ರದಳ ಕೋಟೇಶ್ವರ ಅಧ್ಯಕ್ಷ ಎಚ್. ಎಂ. ಗೋಪಾಲಕೃಷ್ಣ ಹತ್ವಾರ್ ಸಭಾಧ್ಯಕ್ಷತೆ ವಹಿಸಿದ್ದರು.
ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇಗುಲದ ಪ್ರಧಾನ ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್ ಆರಂಭದಲ್ಲಿ ಶ್ರೀ ಕೃಷ್ಣ ಮೂರ್ತಿಗೆ ದೀಪ ಬೆಳಗುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭಹಾರೈಸಿದರು.
ಮಿತ್ರದಳದ ಪೂರ್ವಾಧ್ಯಕ್ಷ ಸೀತಾರಾಮ ಧನ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಿತ್ರದಳ ಕಾರ್ಯದರ್ಶಿ ಚಿದಂಬರ ಉಡುಪ, ಉಪಾಧ್ಯಕ್ಷ ಕೃಷ್ಣಾನಂದ ಪೈ ಉಪಸ್ಥಿತರಿದ್ದರು.
ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.