ಡೈಲಿ ವಾರ್ತೆ:31 ಆಗಸ್ಟ್ 2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾದಲ್ಲಿ ನಾರಾಯಣ ಗುರುಗಳ 169ನೇ ಜಯಂತ್ಯೋತ್ಸವದ ಅದ್ದೂರಿ ಮೆರವಣಿಗೆ :ತಹಸೀಲ್ದಾರ್ ರಿಂದ ಕಾರ್ಯಕ್ರಮ ಉದ್ಘಾಟನೆ
ಅಂಕೋಲಾ : ಕೇರಳದಲ್ಲಿ ಜಾತಿ ವ್ಯವಸ್ಥೆಯಿಂದ ಬಳಲಿ ಬೆಂಡಾಗಿರುವ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತವರು ಶ್ರೀ ನಾರಾಯಣ ಗುರುಗಳು. ಸಮಾನತೆಗಾಗಿ ಈಡೀ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹೋರಾಟಗಾರ. ಈ ಮೂಲಕವಾಗಿ ದೇಶದಲ್ಲಿಯೇ ಮೌನ ಕ್ರಾಂತಿಯನ್ನು ಮಾಡಿದವರು. ಅವರ ಅನುಯಾಯಿಗಳು ಭಾರತವಲ್ಲದೇ ಹೊರ ದೇಶದಲ್ಲಿಯೂ ಕೂಡ ಇಂದು ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಅಶೋಕ ಎನ್. ಭಟ್ ಹೇಳಿದರು.
ತಹಸೀಲ್ದಾರ್ ಕಚೇರಿಯ ನ್ಯಾಯಾಲಯದ ಸಭಾಭವನದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ ಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವ ಹಾಗೂ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ನುಲಿಯ ಚಂದಯ್ಯ ಅವರು ಕೂಡ ಇದ್ದು ವಚನಗಳನ್ನು ಸಂರಕ್ಷಿಸುವುದರಲ್ಲಿ ಅವರ ಪಾತ್ರ ಅಪಾರವಾದದ್ದು ಎಂದರು.
ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ, ಶ್ರೀ ನಾರಾಯಣ ಗುರುಗಳು ಮನುಕುಲವನ್ನು ಒಂದೇ ಎನ್ನುವ ಸಾರಾಂಶವನ್ನು ತಿಳಿಸಿದವರು ಎಂದರು. ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಲವು ಪವಾಡಗಳ ಮೂಲಕ ಮನುಷ್ಯತ್ವವನ್ನು ಪ್ರತಿಯೊಬ್ಬರಲ್ಲಿಯೂ ಕಾಣುವಂತೆ ಮಾಡಿದವರು ಎಂದರು.
ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ನಾಯ್ಕ ಮಾತನಾಡಿ, ನಾರಾಯಣ ಗುರುಗಳು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲ ಒಂದೇ ಎಂದು ಸಾರಿದ ಮಹಾತ್ಮರು ಎಂದರು. ನಾಮಧಾರಿ ಈಡಿಗ ನೌಕರರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಬಿಇಓ ಮಂಗಳಲಕ್ಷ್ಮೀ ಪಾಟೀಲ, ತಾಪಂ.ಪ್ರಭಾರ ಇಓ ಸುನೀಲ ಎಂ.,ಪಿಎಸ್‍ಐ ಉದ್ದಪ್ಪ ಧರೆಪ್ಪನವರ ಮಾತನಾಡಿದರು. ಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಕುರಿತು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಉಪನ್ಯಾಸ ನೀಡಿದರು.
ಟಿಎಚ್‍ಓ ಡಾ.ಜಗದೀಶ ನಾಯ್ಕ, ಸಿಡಿಪಿಓ ಸವಿತಾ ಶಾಸ್ತ್ರೀಮಠ, ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ, ವಿವಿಧ ಸಂಘಟನೆಯ ಪ್ರಮುಖರಾದ ಮಾದೇವ ಎಂ. ನಾಯ್ಕ, ರಮೇಶ ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ಡಿ. ನಾಯ್ಕ, ಜಟ್ಟಿ ನಾಯ್ಕ, ಸುರೇಶ ನಾಯ್ಕ ಅಸ್ಲೆಗದ್ದೆ, ಮಂಜುಳಾ ನಾಯ್ಕ, ಸಂಜಯ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ಶ್ರೀಧರ ನಾಯ್ಕ, ಗೋವಿಂದ್ರಾಯ ನಾಯ್ಕ, ಮೋಹನ ಎಚ್. ನಾಯ್ಕ, ವಸಂತ ನಾಯ್ಕ, ಶ್ರೀಪಾದ ಟಿ. ನಾಯ್ಕ ಸೇರಿದಂತೆ ನೂರಾರು ಜನರು ಉಪ ಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷ ಉಮೇಶ ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ರಾಜೇಶ ಮಿತ್ರಾ ನಾಯ್ಕ, ಡಾ.ವಿನಾಯಕ ಹೆಗಡೆ, ಮಂಜುನಾಥ ಇಟಗಿ, ಗಣೇಶ ನಾಯ್ಕ, ಗಜು ನಾಯ್ಕ ಸೇರಿದಂತೆ ಹಲವರು ಸಹಕರಿಸಿದರು. ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ನಾರಾಯಣಗುರು ಸ್ತಬ್ಧಚಿತ್ರದ ಮೂಲಕ ಪಟ್ಟಣವನ್ನು ಸಂಚರಿಸಿ ನಂತರ ತಹಸೀಲ್ದಾರ್ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.