ಡೈಲಿ ವಾರ್ತೆ:07 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಸೆ.9ರಂದು ಬೆಂಗಳೂರಿನಲ್ಲಿ ನಡೆಯುವ ಸಮಾನ ಮನಸ್ಕರ ಸಭೆಗೆ ಹೆಚ್ಚಿನ ಜನರು ಬರುವಂತಾಗಬೇಕು : ಡಿ.ಜಿ. ನಾಯ್ಕ
ಅಂಕೋಲಾ : ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವ ಈಡಿಗರನ್ನು ಎಲ್ಲಾ ಸ್ತರದಲ್ಲಿಯೂ ತುಳಿಯುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಈಡಿಗ ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ. 9ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ತಾಲೂಕು ಹಾಗೂ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ಡಿ.ಜಿ.ನಾಯ್ಕ ಹೇಳಿದರು.
ಅಂಕೋಲಾದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದುಳಿದ ವರ್ಗ ದವರು ಜಾಗೃತರಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಡಿಗರ ಜತೆ ಹಿಂದುಳಿದ ವರ್ಗದ ಸ್ವಾಮೀಜಿಗಳು ಹಾಗೂ ರಾಜಕೀಯ ನಾಯಕರು ಕೂಡ ಆಗಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಮಂಜುಳಾ ನಾಯ್ಕ, ಉಪಾಧ್ಯಕ್ಷರಾದ ರಮೇಶ ಎನ್. ನಾಯ್ಕ ಬೊಬ್ರುವಾಡ, ಉಮೇಶ ಎನ್. ನಾಯ್ಕ, ಸಂಜಯ ಆರ್. ನಾಯ್ಕ, ಖಜಾಂಚಿ ಶ್ರೀಪಾದ ಟಿ. ನಾಯ್ಕ, ಯುವ ಘಟಕದ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ಇತರರು ಉಪಸ್ಥಿತರಿದ್ದರು.