ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ಬಂಟ್ವಾಳ ಕಮ್ಯೂನಿಟಿ ಸೆಂಟರ್ ನಿಂದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ ತರಗತಿ ಉದ್ಘಾಟನೆ: ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ, ಕನಸು ಅಗತ್ಯ – ಹನೀಫ್ ಹಾಜಿ ಗೋಳ್ತಮಜಲು

ಬಂಟ್ಚಾಳ: ಶಿಕ್ಷಣವು ಸ್ವಂತ ತಮ್ಮನ್ನು ಬದಲಾಯಿಸುವುದರ ಜೊತೆಗೆ ತಮ್ಮ ಕುಟುಂಬ, ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ವಿದ್ಯಾರ್ಥಿಗಳು ನಿರ್ದಿಷ್ಠ ಗುರಿ, ಕನಸನ್ನು ಹೊಂದುವ ಮೂಲಕ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಇದರ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಹೇಳಿದರು.

ಬಂಟ್ವಾಳ ಕಮ್ಯೂನಿಟಿ ಸೆಂಟರ್ ಹಾಗೂ ದಿ ನಾಲೇಜ್ಡ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಕೈಕಂಬ, ಬಿ.ಸಿ.ರೋಡ್ ಇದರ ವತಿಯಿಂದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತೀ ರವಿವಾರ ನಡೆಯುವ ಫ್ರೀ ಟ್ಯೂಷನ್ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳನ್ನು ನಿರಂತರ ಸಂಪರ್ಕದಲ್ಲಿ ಇಟ್ಟುಕೊಂಡು ಶೈಕ್ಷಣಿಕ ಗುರಿ ಸಾಧನೆಗೆ ಶ್ರಮಿಸುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇರುವ ಬಂಟ್ವಾಳ ತಾಲೂಕಿನಲ್ಲಿ ಕಮ್ಯೂನಿಟಿ ಸೆಂಟರ್ ಕಾರ್ಯಾಚರಿಸುತ್ತಿರುವುದು ಶಾಘ್ಲನೀಯ. ಕಮ್ಯೂನಿಟಿ ಸೆಂಟರ್ ನ ಕಾರ್ಯಕ್ರಮಗಳ ಸದುಪಯೋಗ ಪಡೆಯುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಯನ್ನು ತಲುಪಿರಿ ಎಂದು ಕರೆ ನೀಡಿದರು.

ಕೋಸ್ಟಲ್ ವುಡ್ ಟಿಂಬರ್ ಮತ್ತು ಪ್ಲೈವುಡ್ ಸಂಸ್ಥಾಪಕ ಮುಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ನಝ್ರೀನ್ ಶಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.