ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಡಾ.ದಿನಕರ ದೇಸಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಅಮೂಲ್ಯ ರತ್ನ : ಗೋಪಾಲಕೃಷ್ಣ ನಾಯಕ

ಅಂಕೋಲಾ : ಡಾ.ದಿನಕರ ದೇಸಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಅಮೂಲ್ಯ ರತ್ನ, ಅವರನ್ನು ಪಡೆದ ಈ ಜಿಲ್ಲೆಯ ಜನ ಭಾಗ್ಯವಂತರು. ಅವರ ತ್ಯಾಗ ಮತ್ತು ಸೇವಾ ಮನೋಭಾವನೆಯಿಂದ ಹುಟ್ಟಿದ ಶಿಕ್ಷಣ ಸಂಸ್ಥೆಗಳಿಂದ ಈ ಜಿಲ್ಲೆಯ ಜನ ಶೈಕ್ಷಣ ಕವಾಗಿ ಗುರುತಿಸಿಕೊಳ್ಳುವಂತಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ) ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಜಿ.ಸಿ.ಕಾಲೇಜಿನ ಸಹಯೋಗದಲ್ಲಿ ಭಾನುವಾರ ಜಿ.ಸಿ. ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಶೈಕ್ಷಣಕ ಕ್ರಾಂತಿಯ ಹರಿಕಾರ ಡಾ. ದಿನಕರ ದೇಸಾಯಿಯವರ ಜನ್ಮದಿನದ ಅಂಗವಾಗಿ ದಿನಕರ ದೇಸಾಯಿ ಅವರ ಪುತ್ಥಳಿಗೆ ಮಾಲಾರ್ಪಣೆಗೈದು ಅವರು ಮಾತನಾಡಿ, ದೇಸಾಯಿ ಅವರು ರೈತರ, ದೀನ ದಲಿತರ, ಕಾರ್ಮಿಕರ ದನಿಯಾಗಿದ್ದು, ಕವಿಯಾಗಿ, ಲೇಖಕರಾಗಿ, ಚುಟುಕುಗಳ ಮೂಲಕ ಸಮಾಜದ ಜಾಗೃತಿಗೂ ಕಾರಣರಾದರು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಗುಂದಿಯವರು ಮಾತನಾಡಿ, ಈ ಕಾಲೇಜಿನ ವಿದ್ಯಾರ್ಥಿಗಳಿಂದ ಕವನ ಗಳನ್ನು ಮತ್ತು ದಿನಕರ ದೇಸಾಯಿವರ ಕುರಿತು ಪ್ರಬಂಧಗಳನ್ನು ರಚಿಸಿ ಉತ್ತಮವಾದುದನ್ನು ಆಯ್ಕೆ ಮಾಡಿ ಕಸಾಪ ವತಿಯಿಂದ ಅದನ್ನು ಪುಸ್ತಕರದ ರೂಪದಲ್ಲಿ ಹೊರತರವುದಾದರೆ ಅದರ ಸಂಪೂರ್ಣ ಖರ್ಚನ್ನು ತಾವೇ ಭರಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಸಿ.ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಮಾತನಾಡಿ, ನಮ್ಮ ಡಾ.ದಿನಕರ ದೇಸಾಯಿ ಅವರ ಜನ್ಮದಿನವನ್ನು ಕಾಲೇಜಿನಲ್ಲಿ ಆಚರಿಸಬೇಕೆಂಬ ಬಯಕೆಗೆ ಸ್ಪಂದಿಸಿದ ಕಸಾಪ ಘಟಕವನ್ನು ಅಭಿನಂದಿಸಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಹಿಂದಿನ ಗತವೈಭವ ಮತ್ತೆ ಮರುಕಳಿಸುವಂತಾಗಬೇಕು ಎಂದರು. ಕಸಾಪ ಕಾರ್ಯದರ್ಶಿ ಜಗದೀಶ ಜಿ.ನಾಯಕ ಹೊಸ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ.ಮೋಹನ ಹಬ್ಬು, ಪ್ರಕಾಶ ಕುಂಜಿ, ಎನ್.ವಿ.ರಾಠೋಡ, ಜಯಶೀಲ ಆಗೇರ, ರಫೀಕ ಶೇಖ, ಎಂ.ಬಿ.ಆಗೇರ, ಪ್ರಕಾಶ ಗಾಂವಕರ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ, ಜಿ.ಸಿ.ಕಾಲೇಜಿನ ಉಪನ್ಯಾಸಕ ವಿ.ಎಂ.ನಾಯ್ಕ, ಗ್ರಂಥ ಪಾಲಕ ನಂಜುಂಡಯ್ಯ, ಸಿಬ್ಬಂದಿ ಸಚಿನ ಶೆಟ್ಟಿ, ನಾಗರಾಜ ನಾಯ್ಕ, ಮಂಜು ಆಗೇರ, ಇತರರು ಉಪಸ್ಥಿತರಿದ್ದರು.
ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಚುಟುಕು ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ಬಿ.ಕಾಂ.ಪದವಿಯ ಸೃಷ್ಠಿ ಎಸ್.ನಾಯಕ (ಪ್ರಥಮ), ಬಿ.ಎಸ್ಸಿ.ಪದವಿಯ ನಿಶ್ಚಿತಾ ಎಸ್. ನಾಯಕ (ದ್ವಿತೀಯ), ಎಂ.ಎಸಿ.ಸ್ನಾತಕೋತ್ತರ ವಿದ್ಯಾರ್ಥಿ ಪ್ರತೀಕ್ಷಾ ಬನಸೋಡೆ (ತೃತೀಯ) ಮತ್ತು ಪ್ರೋತ್ಸಾಹಕ ವಾಗಿ ಪಿಯು ದ್ವಿತೀಯ (ವಿಜ್ಞಾನ) ನಾಗಶ್ರೀ ನಾಯ್ಕ, ಪಿಯು ಪ್ರಥಮ (ವಿಜ್ಞಾನ) ದರ್ಶನ ನಾಯ್ಕ ಇವ ರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು ಹಾಗೂ ಸೃಷ್ಠಿ ನಾಯಕ ದಿನಕರ ದೇಸಾಯಿ ಕುರಿತು ಭಾಷಣ ಮಾಡಿದರು. ನಿಶ್ವಿತಾ ನಾಯಕ ದೇಸಾಯಿಯವರ ಕುರಿತು ಬರೆದ ಚುಟುಕು ವಾಚಿಸಿ ದರು.