ಡೈಲಿ ವಾರ್ತೆ:11 ಸೆಪ್ಟೆಂಬರ್ 2023
ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 5,500 ಕೋಟಿ ಬೇಕು: ರಾಮಲಿಂಗಾ ರೆಡ್ಡಿ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 5,500 ಕೋಟಿ ರೂ. ಬೇಕು. ಇದನ್ನು ಮಾಡಲು ಸಾಧ್ಯವೇ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟ ಸೋಮವಾರ ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಕ್ಕೂಟ ಬೇಡಿಕೆ ಈಡೇರಿಸಲು 5,500 ಕೋಟಿ ರೂ. ಸರ್ಕಾರಕ್ಕೆ ಬೇಕಾಗುತ್ತದೆ. ಇದನ್ನು ಮಾಡೋಕೆ ಸಾಧ್ಯಾನಾ? ಖಾಸಗಿ ಸಾರಿಗೆಯವರ ಬೇಡಿಕೆಗಳಲ್ಲಿ 2 ಸಮಸ್ಯೆಗಳು ಮಾತ್ರ ನಮಗೆ ಸೇರಿದ್ದು, ಉಳಿದ ಸಮಸ್ಯೆಗಳು 4-5 ವರ್ಷಗಳಿಂದ ಇದೆ ಎಂದರು.
ಬಿಜೆಪಿ ರಾಜಕೀಯಕ್ಕಾಗಿ ಮುಷ್ಕರಕ್ಕೆ ಬೆಂಬಲ ಕೊಟ್ಟಿದೆ. ಬಿಜೆಪಿಯವರ ಸರ್ಕಾರ ಇದ್ದಾಗ ಯಾಕೆ ಸಮಸ್ಯೆ ಪರಿಹಾರ ಮಾಡಲಿಲ್ಲ? ಸರ್ಕಾರ ಪ್ರಾಕ್ಟಿಕಲ್ ಆಗಿ ಇರೋ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಸಿಎಂ ಜೊತೆ ಮಾತನಾಡಿ ಪರಿಹಾರ ಮಾಡುತ್ತೇವೆ ಎಂದು ತಿಳಿಸಿರು.
ಮುಷ್ಕರದ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಸೇವೆಗಳನ್ನು ನೀಡಿದ್ದೇವೆ. ಪ್ರಯಾಣಿಕರು, ಜನರು ಯಾರೂ ಆತಂಕ ಪಡುವುದು ಬೇಡ. ಆದರೆ ಯಾರಾದರೂ ಕಲ್ಲು ಹೊಡೆಯುವುದು, ಪ್ರಯಾಣಿಕರಿಗೆ ತೊಂದರೆ ಕೊಡುವುದು ಮಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಯಾಣಿಕರು ದೂರು ನೀಡಿದರೆ ಕ್ರಮ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.