ಡೈಲಿ ವಾರ್ತೆ:11 ಸೆಪ್ಟೆಂಬರ್ 2023

ಬೆಂಗಳೂರು ಬಂದ್ ವಾಪಸ್ ಪಡೆದ ಖಾಸಗಿ ಸಾರಿಗೆ ಸಂಘಟನೆಗಳು

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಹೊಡೆತಬಿದ್ದಿದೆ. ಹಾಗಾಗಿ ಇಂದು ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಕ್ಯಾಬ್ ಮಾಲೀಕರು ಬಂದ್ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಖಾಸಗಿ ಸಾರಿಗೆ ಒಕ್ಕೂಟಗಳು ಹಿಂದಕ್ಕೆ ಪಡೆದಿವೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟ ನಿರತರ ಮನವಿ ಆಲಿಸಿದ ಬಳಿಕ ಬಂದ್ ಸಂಘಟನೆಗಳು ಕೈ ಬಿಟ್ಟಿವೆ.
ಪ್ರತಿಭಟನೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿದ ಅವರು, ಸಂಘಟನೆಗಳ ಬೇಡಿಕೆ ಆಲಿಸಿ ಬಳಿಕ ಮಾತನಾಡಿದರು. ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

37 ಸಂಘಟನೆ ಇದೆ, ನನ್ನನ್ನು ನಿನ್ನ ಜತೆ ಸೇರಿಸಿಕೊಳ್ಳಿ, ನಾನು ನಿಮ್ಮಲ್ಲಿ ಒಬ್ಬನು. ನಾನು‌ 4 ತಿಂಗಳಿನಿಂದ ಸಾರಿಗೆ ಸಚಿವನಾಗಿದ್ದೇನೆ, ಏನಾದರೂ ತೊಂದರೆ ಆಗಿದೆಯಾ? ಬಹುತೇಕ ಬೇಡಿಕೆಯನ್ನು ನಾನು ಸರಿಪಡಿಸುತ್ತಿದ್ದೇನೆ. ಚಾಲಕರ ಅಭಿವೃದ್ಧಿ ಬಗ್ಗೆ ಹೇಳಿದ್ದೀರಾ, ಅದನ್ನು ಮಾಡೇ ಮಾಡುತ್ತೇವೆ. ಏರ್ಪೋರ್ಟ್ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತೇವೆ. ಅಗ್ರಿಗೇಟರ್ ಆಪ್ ಕೂಡ ಮಾಡುತ್ತೇವೆ. ಆಪ್ ಮೂಲಕ ಸಂಸ್ಥೆ ಹಣ ಹೊಡಿತಿದೆ, ಇದರ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ. ಕಡಿಮೆ ಬಡ್ಡಿ ದರದಲ್ಲಿ ಹಿಂದುಳಿದ ವರ್ಗಗಳ ನಿಗಮದಿಂದ ಕೊಡಿ ಎಂದಿದ್ದಾರೆ, ಅದು ಕೂಡ ಮಾಡಿಕೊಡುತ್ತೇನೆ. ಈ ಕುರಿತಾಗಿ ಸಿಎಂ ಜತೆ ಚರ್ಚಿಸುತ್ತೇನೆಂದಿದ್ದಾರೆ.
ಓಲಾ, ಊಬರ್, ಬೈಕ್ ಟ್ಯಾಕ್ಸಿ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ನಡಿತಿದೆ, ಇದಕ್ಕೆ ಸೀನಿಯರ್ ವಕೀಲರನ್ನು ಇಟ್ಟು ವೆಕೇಟ್ ಮಾಡಿಸುತ್ತೇನೆ. ಒಂದು ನಗರ, ಒಂದು ದರ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಜಮೀರ್ ಅಹಮದ್ ಅವರ ಜತೆ ಮಾತನಾಡಿದ್ದೀನಿ, ವಸತಿ ಯೋಜನೆ ಮಾಡಿಕೊಡೋಣ. ಮಕ್ಕಳಿಗೆ 17 ಕೋಟಿ ವಿದ್ಯಾಭ್ಯಾಸಕ್ಕಾಗಿ ಅನುದಾನ ಇಡಲಿದ್ದೇವೆ ಎಂದಿದ್ದಾರೆ.
ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಆಗಬೇಕು. ಖಾಸಗಿ ವಾಹನ ಕಿಲೋಮೀಟರ್ ಮೇಲೆ ತೆಗೆದುಕೊಳ್ಳುವ ಬಗ್ಗೆ ಎಂಡಿ ಜತೆ ಚರ್ಚೆ ಮಾಡುತ್ತೇನೆ. ಟ್ಯಾಕ್ಸ್ ಕಡಿಮೆ ಮಾಡುವ ಬಗ್ಗೆ ಸಿಎಂ ಜತೆ ಮಾತುಕತೆ ಆಗಲಿದೆ. ಟ್ಯಾಕ್ಸ್ one time settlement( ಟ್ರಾಫಿಕ್ 50% ಡಿಸ್ಕೌಂಟ್ ಕೊಟ್ಟ ಹಾಗೆ) ಬಗ್ಗೆ ಚರ್ಚೆ ನಡೆಸುತ್ತೇನೆ. ಶಾಲಾ ವಾಹನ ಸಣ್ಣ ಅದನ್ನು ಮಾಡುತ್ತೇನೆ. ಪೋರ್ಟರ್ ವಾಹನ ಲೈಸೆನ್ಸ್ ತೆಗೆದುಕೊಂಡಿಲ್ಲ, ಕಾನೂನು ಬಾಹೀರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ್ದಾರೆ.