ಡೈಲಿ ವಾರ್ತೆ: 12/09/2023

ಬೆಳಗಾವಿ : ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವಿಸಿ 8 ಜನ

ಯುವಕರು ಅಸ್ವಸ್ಥರಾಗಿರುವ ಬಗ್ಗೆ ಬೆಳಗಾವಿಯಿಂದ ವರದಿಯಾಗಿದೆ.
8 ಜನ ಪ್ರಯಾಣಿಕರು ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿರುವ ಆಘಾತಕಾರಿ ಘಟನೆ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಗೋವಾದಿಂದ ದೆಹಲಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಅಸ್ವಸ್ಥ ಆಗಿರುವುದು ಅನುಮಾನಾಸ್ಪದವಾಗಿದೆ.

ರೈಲು ಬೆಳಗಾವಿಗೆ ಬರುತ್ತಿದ್ದಂತೆ ಈ ವಿಷಯವನ್ನು ಬೆಳಗಾವಿ ಸ್ಟೇಷನ್ ಮಾಸ್ಟರ್ ಗಮನಕ್ಕೆ ತರಲಾಗಿದೆ.
ತಕ್ಷಣವೇ ಅಲ್ಲಿದ್ದ ಪೊಲೀಸರು 8 ಪ್ರಯಾಣಿಕರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಅವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೈಲಿನಲ್ಲಿ ಪ್ರಯಾಣಿಕರ ಪ್ರಜ್ಞೆ ತಪ್ಪಿದ್ದನ್ನು ಕಂಡ ಸಹ ಪ್ರಯಾಣಿಕರು ಬೆಳಗಾವಿ ರೈಲು ನಿಲ್ದಾಣ ಬರುತ್ತಿದ್ದಂತೆ ವಿಚಾರವನ್ನು ಅಲ್ಲಿನ ರೈಲ್ವೆ ಪೊಲೀಸರ ಗಮನಕ್ಕೆ ತಂದರು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಯಾವುದರಿಂದ ಘಟನೆ ನಡೆದಿದೆ.? ಸಹ ಪ್ರಯಾಣಿಕರ ನೀಡಿದ ಆಹಾರ ಸೇವಿಸಿ ಈ ರೀತಿ ಆಗಿದ್ಯಾ.? ಬೇರೆ ಏನಾದರೂ ಕಾರಣ ಇದ್ಯಾ.? ಎಂಬ ಆಯಾಮಗಳಲ್ಲಿ ಬೆಳಗಾವಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.