ಡೈಲಿ ವಾರ್ತೆ: 13/09/2023
ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದ ವಂಚಕಿ ಚೈತ್ರಾ ಕುಂದಾಪುರ
ಕುಂದಾಪುರ: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರೂಪಾಯಿ ವಂಚಿಸಿರುವ ಆರೋಪದ ಮೇರೆಗೆ ಚೈತ್ರಾರನ್ನು ಮಂಗಳವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಸದ್ಯ ಪ್ರಕರಣದಲ್ಲಿ ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ನನ್ನೂ ಕೂಡಾ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದ್ದು, ಚೈತ್ರಾ ಕುಂದಾಪುರ ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್ ಎಸ್ ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ.
ಇದಕ್ಕಾಗಿ ವ್ಯವಸ್ಥಿತ ಪ್ಲಾನ್ ಮಾಡಿದ್ದ ಚೈತ್ರಾ ಕುಂದಾಪುರ ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್ ಒಂದರಲ್ಲಿ ಮೇಕಪ್ ಮಾಡುವ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರ್‌ಎಸ್‌ಎಸ್ ಪ್ರಚಾರಕರು ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಪರಿಚಯ ಮಾಡಿಸಲಾಗಿತ್ತು. ಅದಲ್ಲದೇ ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿ ಉದ್ಯಮಿಯನ್ನು ಮೋಸದ ಬಲೆಗೆ ಚೈತ್ರಾ ಕುಂದಾಪುರ ಸಿಲುಕಿಸಿದ್ದರು ಎಂದು ತಿಳಿದುಬಂದಿದೆ.
ಕಡೂರಿನ ರಮೇಶ್ ಎಂಬಾತನಿಗೆ ಆರ್‌ಎಸ್‌ಎಸ್ ಪ್ರಚಾರಕ ವಿಶ್ವನಾಥ್ ಜೀ ಎಂಬ ಹೆಸರಿನ ಪಾತ್ರ ನೀಡಲಾಗಿತ್ತು. ಬೈಂದೂರಿನ ಬಿಜೆಪಿ ಟಿಕೆಟ್ ಉದ್ಯಮಿಯ ಕೈತಪ್ಪಿದಾಗ ಹಣವನ್ನು ವಿಶ್ವನಾಥ್ ಜೀಗೆ ತಲುಪಿಸಿರುವುದಾಗಿ ಹೇಳಿದ್ದ ಚೈತ್ರಾ ಕುಂದಾಪುರ ಸ್ವತಃ ತಾನು ಕೂಡ ಮೋಸ ಹೋಗಿದ್ದೇನೆ ಎಂದು ಹೇಳಿದ್ದಳಂತೆ. ಒಂದಿಷ್ಟು ದಿನದ ಬಳಿಕ ಚೈತ್ರಾ ಕುಂದಾಪುರಳಿಂದ ಮೋಸ ಹೋಗಿರುವುದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ತಿಳಿದಿದೆ.
RSS ಕಚೇರಿ ಎದುರು ಟೋಕನ್ ಅಡ್ವಾನ್ಸ್ ಹಸ್ತಾಂತರ:
ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ ನಂಬಿಕೆ ಇರಿಸಿದ ಗೋವಿಂದರವರು ರೂ.50,00,000/- (ಐವತ್ತು ಲಕ್ಷ ರೂಪಾಯಿ ಹಣವನ್ನು 07.07.2022ರಂದು ಪ್ರಸಾದ್ ಬೈಂದೂರ್ ಮುಖಾಂತರ ಗಗನ್ ಕಡೂರ್ ರವರಿಗೆ ನೀಡಿರುತ್ತಾರೆ. ಗಗನ್ ಕಡೂರು ಈ ಹಣವನ್ನು ಶಿವಮೊಗ್ಗದ RSS ಕಚೇರಿ ಎದುರು ಪಡೆದುಕೊಂಡಿರುತ್ತಾನೆ. ಬಳಿಕ ವಿಶ್ವನಾಥ್ ಜಿ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ರವರು ಕಾನ್ಸರೆನ್ಸ್ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ, 2023ರ ಚುನಾವಣೆಯಲಿ, ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂಬ ಮಾಹಿತಿಯನ್ನು ಗೋವಿಂದ ಅವರಿಗೆ ನೀಡಿರುತ್ತಾರೆ.
ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.