ಡೈಲಿ ವಾರ್ತೆ:15 ಸೆಪ್ಟೆಂಬರ್ 2023
ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ : ಕೋಟಿಲಿಂಗೇಶ್ವರ ದೇವಳದಲ್ಲಿ ಭಾರತೀಯ ಸಂವಿಧಾನ ಪೀಠಕೆ ಪಠಣ
ಕುಂದಾಪುರ : ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಆದೇಶದನ್ವಯ ಸೆ. 15ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕೋಟೇಶ್ವರದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಭಾರತ ಸಂವಿಧಾನದ ಪೀಠಕೆಯನ್ನು ಸಾಮೂಹಿಕವಾಗಿ ಓದಲಾಯಿತು.
ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಸಮಿತಿ ಸದಸ್ಯರು, ಸರದಿ ಅರ್ಚಕ ಗಣೇಶ್ ಅಡಿಗ ಅಲ್ತಾರು, ಸಹ ಅರ್ಚಕರು ಹಾಗೂ ಸಿಬಂದಿ ವರ್ಗದವರು ಭಾರತೀಯ ಸಂವಿಧಾನದ ಪೀಠಕೆ ” ಭಾರತದ ಪ್ರಜೆಗಳಾದ ನಾವು….. ಶಾಸನವಾಗಿ ವಿಧಿಸಿಕೊಂಡಿದ್ದೇವೆ ” ಎಂಬ ವಾಕ್ಯಗಳನ್ನು ಪ್ರತಿಜ್ಞಾಪೂರ್ವಕವಾಗಿ ಓದುವ ಮೂಲಕ ಭಾರತೀಯ ಸಂವಿಧಾನದ ತತ್ವಗಳನ್ನು ತಮ್ಮ ಜೀವನದಲ್ಲಿ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಪ್ರತಿಜ್ಞೆಗೈದರು.
ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯದ ಉಡುಪಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರವರ್ಗ ಎ ಮತ್ತು ಬಿ ವಿಭಾಗದ ಎಲ್ಲ ದೇವಸ್ಥಾನಗಳಲ್ಲಿನ ಮುಖ್ಯಸ್ಥರು ಮತ್ತು ಸಿಬಂದಿಗಳು ಪೀಠಕೆ ಪಠಣ ಮಾಡಿ, ಪ್ರತಿಜ್ಞೆಗೈದು, ಸಂಬಂಧಿಸಿದ ಫೋಟೋಗಳನ್ನು ವೆಬ್ ಸೈಟ್ ನಲ್ಲಿ ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರನ್ವಯ ಮುಜರಾಯಿ ಇಲಾಖೆ ಜಿಲ್ಲೆಯ ಎಲ್ಲಾ ದೇವಾಲಯಗಳಿಗೂ ಸುತ್ತೋಲೆ ರವಾನಿಸಿತ್ತು. ತಾಲೂಕಿನ ವಿವಿಧ ದೇವಾಲಯಗಳಲ್ಲಿ ಪೀಠಕೆ ಓದಿದ ಬಗ್ಗೆ ವರದಿಗಳು ಬಂದಿವೆ.