ಡೈಲಿ ವಾರ್ತೆ: 17/09/2023

ಲಿಂಗಾಯತ ಸಂಘಟನೆ ವತಿಯಿಂದ ‘ವಚನ ಚಿಂತನ’ ಕಾರ್ಯಕ್ರಮ: ವಚನಗಳಲ್ಲಿಯ ವಾಸ್ತವಿಕತೆ ಅರಿತು ಇನ್ನಾದರೂ ಬದುಕು ಸಾಗಿಸೋಣ – ಸಾಹಿತಿ ವೀರಭದ್ರ ಅಂಗಡಿ ಅಭಿಮತ

ಬೆಳಗಾವಿ: ಸಾಹಿತ್ಯದ ಪ್ರಕಾರಗಳಲ್ಲಿಯೇ ಶ್ರೇಷ್ಠತೆಯನ್ನು ಮೆರೆದಿರುವ ವಚನ ಸಾಹಿತ್ಯ 12 ನೇ ಶತಮಾನದಲ್ಲಿಯೇ ವಚನಗಳಲ್ಲಿ ಭವಿಷ್ಯದ ಸರ್ವಕಾಲಿಕ ಸತ್ಯ ಮತ್ತು ಜೀವನದ ತತ್ವಗಳನ್ನು ಅರ್ಥಯುತವಾಗಿ ಕಟ್ಟಿಕೊಟ್ಟಿದೆ.ಆ ವಚನ ಸಾಹಿತ್ಯದ ಸಾರಯುಕ್ತ ವಾಸ್ತವಿಕತೆಯ ಸತ್ಯವನ್ನು ಇನ್ನಾದರೂ ನಾವು ಪಾಲಿಸುತ್ತಾ ಬದುಕನ್ನು ಪಾವನಗೊಳಿಸಬೇಕಿದೆ ಎಂದು ಬೆಳಗಾವಿ ಜಿಲ್ಲಾ ಕ.ಸಾ.ಪ ಜಿಲ್ಲಾ ಪದಾಧಿಕಾರಿ ಮತ್ತು ಸಾಹಿತಿ ವೀರಭದ್ರ ಅಂಗಡಿ ರವಿವಾರ ದಿ.17ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ’ ವಚನ ಚಿಂತನ’ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿಯ ವಾಸ್ತವಿಕತೆ’ ವಿಷಯದ ಕುರಿತು ಮಾತನಾಡಿದರು.

ಶರೀರ ನಶ್ವರ ಆತ್ಮ ಅಮರ ಒಳಗಿನ ಚೈತನ್ಯವನ್ನು ಶುದ್ಧವಾಗಿರಿಸಿಕೊಂಡು ಶ್ರೇಷ್ಠತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಧರೆ ಹೊತ್ತಿ ಉರಿದರೆ ನಿಲ್ಲಬಹುದೇ, ಕಂಡ ಕಂಡದ್ದನ್ನೆಲ್ಲ ಕೊಂಡು ಅಟ್ಟಹಾಸದಿ ಮೆರೆದ ಜನಕೆ, ಕಾಣದ ಜೀವಿಯೊಂದು ಜಗವ ತಲ್ಲಣಿಸಿತು., ಮರದೊಳಗಿನ ಮಂದಾಗ್ನಿ ಉರಿಯದಿರ್ಪದು ಎಂಬ ಜೀವನದ ವಾಸ್ತವ್ಯಕತೆಯನ್ನು ಹುದುಗಿಕೊಂಡಿರುವ ಶರಣರ ಹಲವಾರು ವಚನಗಳನ್ನು ಹೇಳಿ ಅವುಗಳನ್ನು ವಿಶ್ಲೇಷಿಸಿದರು. ಅಧ್ಯಕ್ಷತೆ ವಹಿಸಿದ್ದ ಸದಾಶಿವ ದೇವರಮನಿ ಮಾತನಾಡಿ ಧರ್ಮ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಧರ್ಮಕ್ಕೆ ನಾನೇನು ಕೊಟ್ಟೆ, ಸಂಘಟನೆಯಿಂದ ನಾನೇನು ಗಳಿಸಿದೆ ಎನ್ನುವುದಕ್ಕಿಂತ ಸಂಘಟನೆಗೆ ನಾನೇನು ಕೊಟ್ಟೆ ಎನ್ನುವ ವಾಸ್ತವ ಅರಿತು ಧರ್ಮ ಒಡೆಯುವುದನ್ನು ಬಿಟ್ಟು ಜೋಡಿಸುವ ಕಾರ್ಯ ಮಾಡಿ ಸಮಾಜವನ್ನು ಶಾಂತಿಯ ತೋಟವಾಗಿ ನಿರ್ಮಾಣ ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಮತ್ತು ಶರಣರು ವಚನಗಳನ್ನು ಹೇಳಿ ವಿಶ್ಲೇಷಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿವಾನಂದ ತಲ್ಲೂರ,ವಿ ಬಿ ದೊಡ್ಡಮನಿ,ಎಸ್ ಎಸ್ ಪೂಜಾರ, ಕೆಂಪಣ್ಣ ರಾಮಪುರ, ವಿ.ಕೆ ಪಾಟೀಲ, ಆನಂದ ಕರ್ಕಿ,ದೀಪಾ ಪಾಟೀಲ, ಅಕ್ಕಮಹಾದೇವಿ ತೆಗ್ಗಿ ಜಯಶ್ರೀ ಚವಲಗಿ, ವಿದ್ಯಾ ಕರ್ಕಿ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಎಂ. ವೈ.ಮೆಣಸಿನಕಾಯಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸುರೇಶ ನರಗುಂದ ನಿರೂಪಿಸಿದರು. ಸಂಗಮೇಶ ಅರಳಿ ವಂದಿಸಿದರು.