ಡೈಲಿ ವಾರ್ತೆ: 17/09/2023

ಹೊನ್ನಾವರ ಸಮುದ್ರ ದಡ ಸೇರಿದ ಎರಡು ದೈತ್ಯ ತಿಮಿಂಗಿಲಗಳ ಶವಗಳು.!

ಹೊನ್ನಾವರ: ಎರಡು ದೈತ್ಯ ತಿಮಿಂಗಿಲಗಳ ಶವಗಳು ಸಮುದ್ರದ ದಡ ಸೇರಿದ ಘಟನೆ ಹೊನ್ನಾವರ ಕಡಲ ತೀರದಲ್ಲಿ ನಡೆದಿದೆ.

ಹೊನ್ನಾವರ ತಾಲೂಕಿನ ಕಡಲ ತೀರದಲ್ಲಿ ವಾರದೊಳಗೆ ಎರಡು ಬೃಹದಾಕಾರದ ತಿಮಿಂಗಿಲ ಶವಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಹಾಗೂ ಸಮುದ್ರ ವಿಜ್ಞಾನಿಗಳಲ್ಲಿ ಆತಂಕ ಮೂಡಿದೆ.

ಈ ಶನಿವಾರ, ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ 29 ಅಡಿ ಉದ್ದ ಮತ್ತು 8 ಅಡಿ ಅಗಲದ ಹೆಣ್ಣು ಬಾಲಿನ್ ತಿಮಿಂಗಿಲವನ್ನು ಕಂಡುಹಿಡಿಯಲಾಯಿತು. ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಪರೀಕ್ಷೆ ನಡೆಸಿ, ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಸಮುದ್ರ ಜೀವಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ.

ಕಳೆದ ಭಾನುವಾರವಷ್ಟೇ ತಾಲೂಕಿನ ಮುಗಳಿ ಬೀಚ್‌ನಲ್ಲಿ ಈಗಾಗಲೇ ಕೊಳೆತ ಸ್ಥಿತಿಯಲ್ಲಿದ್ದ ತಿಮಿಂಗಿಲಗಳ ಶವಗಳು ಪತ್ತೆಯಾಗಿದ್ದವು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.