ಡೈಲಿ ವಾರ್ತೆ:19 ಸೆಪ್ಟೆಂಬರ್ 2023

ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ: ಹಾಲಶ್ರೀ ಬಂಧನ.! ಚೈತ್ರಾ ಕಲರ್ ಕಲರ್ ಕತೆಗೆ ಸಿಗಲಿದೆಯಾ ಕ್ಲೈಮ್ಯಾಕ್ಸ್?

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಅವರಿಗೆ ಕೋಟಿ ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಹಾಲಶ್ರೀಯನ್ನು ಕೊನೆಗೂ ಬಂಧಿಸಲಾಗಿದೆ.
ಸಿಸಿಬಿ ಪ್ರಕರಣ ದಾಖಲಿಸಿದಾಗಿನಿಂದ ಆರೋಪಿ ನಾಪತ್ತೆಯಾಗಿದ್ದು, ಸಿಸಿಬಿ ಕುಣಿಕೆಯಿಂದ ಜಾರಿಕೊಳ್ಳಲು ಭಾರೀ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ.

ಹಾಲಶ್ರೀ ಜನರಿಗೆ ತಿಳಿಯದಂತೆ ಸಾಮಾನ್ಯರ ವೇಷದಲ್ಲಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಕಾರು ಬಳಸಿದರೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಸಂಚಾರಕ್ಕೆ ರೈಲನ್ನೇ ಆಯ್ಕೆ ಮಾಡಿಕೊಂಡು ಈಶಾನ್ಯ ರಾಜ್ಯಕ್ಕೆ ತೆರಳುವ ಸಂಚು ರೂಪಿಸಿರುವುದು ಬಯಲಾಗಿದೆ. ಈ ಮೂಲಕ ಕಾಶಿಗೆ ತೆರಳಲು ತಯಾರಿ ನಡೆಸಿರುವುದು ತಿಳಿದು ಬಂದಿದೆ.

ಮೈಸೂರು, ಹೈದ್ರಾಬಾದ್, ಪುರಿ ಗಂಜಮ್, ಕಟಕ್ ಮಾರ್ಗವಾಗಿ ಕಾಶಿಗೆ ತೆರಳಲು ಪ್ಲಾನ್ ಆಗಿತ್ತು. ಆದರೆ ಒಡಿಸ್ಸಾದ ಕಟಕ್‍ನಲ್ಲಿ ಸಿಸಿಬಿ ಖೆಡ್ಡಾಕ್ಕೆ ಸ್ವಾಮೀಜಿ ಬಿದ್ದಿದ್ದಾರೆ. ಒಡಿಸ್ಸಾ ಪೊಲೀಸರ ಸಹಾಯದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಸಿಸಿಬಿ ಬಂಧಿಸಿದೆ. ಆರೋಪಿ ಜೊತೆಯಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಹಾಲಶ್ರೀ ಪೊಲೀಸರ ಕಣ್ಣು ತಪ್ಪಿಸಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ಅಲ್ಲದೇ ನಾಲ್ಕು ಬೇಸಿಕ್ ಫೋನ್‍ಗಳು ಹಾಗೂ 4 ಸಿಮ್‍ಗಳ ಬಳಕೆ ಮಾಡುತ್ತಿದ್ದರು ಎಂಬ ವಿಚಾರ ಸಹ ಬೆಳಕಿಗೆ ಬಂದಿದೆ.

ಇನ್ನೂ ಪ್ರಕರಣದ ಎ1 ಆರೋಪಿ ಚೈತ್ರಾ ಕುಂದಾಪುರ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬರುವಾಗ ಸ್ವಾಮೀಜಿ ಅರೆಸ್ಟ್ ಆದರೆ ಎಲ್ಲಾ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತದೆ ಎಂದು ಹಾಕಿದ್ದ ಬಾಂಬ್ ಈಗ ಸಿಡಿಯಲಿದೆಯೇ? ಎಂಬ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ. ಸ್ವಾಮೀಜಿ ಈಗ ಯಾರ ಯಾರ ಹೆಸರು ಬಾಯಿ ಬಿಡಲಿದ್ದಾರೆ? ಯಾರೆಲ್ಲ ಪ್ರಕರಣದ ಹಿಂದೆ ಇದ್ದಾರೆ? ಎಂಬ ವಿಚಾರ ಇನ್ನಷ್ಟೇ ಹೊರಬರಬೇಕಿದೆ.