ಡೈಲಿ ವಾರ್ತೆ:19 ಸೆಪ್ಟೆಂಬರ್ 2023

5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

ನವದೆಹಲಿ: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ 5 ದಿನಗಳ ಒಳಗಡೆ ದೇಶವನ್ನು ತೊರೆಯುವಂತೆ ಕೆನಡಾ ರಾಯಭಾರಿಗೆ ಭಾರತ ಸೂಚಿಸಿದೆ.

ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ.

ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ.

ಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.

ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ.