ಡೈಲಿ ವಾರ್ತೆ: 23/Sep/2023
ಮಣಿಪಾಲ: 7 ಲಕ್ಷ ರೂ. ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ತೋರಿದ ಆಟೋ ಚಾಲಕ
ಮಣಿಪಾಲ: ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ)ಮಣಿಪಾಲ ಇದರ ಸದಸ್ಯ ಸತೀಶ್ ಎಂ. (𝙺𝙰20 ಡಿ – 5055) ಎಂಬುವರ ರಿಕ್ಷಾದಲ್ಲಿ ಕುಂದಾಪುರ ನಿವಾಸಿ ಎಚ್. ಅನಂತ್ ದೇವಾಡಿಗ ಎಂಬುವರ ಮಗ ಅರಿವಿಲ್ಲದೆ ಬಿಟ್ಟುಹೋಗಿದ್ದ 7 ಲಕ್ಷ ರೂ. ಮೊತ್ತದ ಚೆಕ್ ಹಾಗೂ ಅಮೂಲ್ಯ ದಾಖಲೆ ಪತ್ರಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ಸೆ. 18ರ ಸೋಮವಾರ ಮಧ್ಯಾನ್ಹ ಸುಮಾರು 12:30ರ ವೇಳೆಯಲ್ಲಿ ದೇವಾಡಿಗ ಅವರು ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದರು. ಆ ಸಮಯದಲ್ಲಿ ಅವರ ಅರಿವಿಗೆ ಬಾರದೆ ತಮ್ಮ 7 ಲಕ್ಷ ರೂ. ಮೊತ್ತದ ಚೆಕ್ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಬಿಟ್ಟಿದ್ದರು. . ಇದು ರಿಕ್ಷಾ ಚಾಲಕ ಸತೀಶ್ ರಿಗೂ ಅರಿವಿಗೆ ಬಾರದೆ, ರಿಕ್ಷಾ ಚಲಾಯಿಸಿಕೊಂಡು ಮಣಿಪಾಲಕ್ಕೆ ಬಂದರು. ಹೀಗೆ ಬರುವಾಗ ತಮ್ಮ ರಿಕ್ಷಾದಲ್ಲಿನ ಪ್ರಯಾಣಿಕರ ಆಸನದಲ್ಲಿ ದಾಖಲೆ ಪತ್ರಗಳಿರುವುದನ್ನು ಕಂಡರು. ಪರಿಶೀಲಿಸಿದಾಗ ಅಮೂಲ್ಯ ದಾಖಲೆಗಳು, ಚೆಕ್ ಇದ್ದಿತ್ತು. ತಕ್ಷಣ ಸತೀಶ್ ಅವರು ರಿಕ್ಷಾ ಚಾಲಕ -ಮಾಲಕರ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಇವರಿಗೆ ವಿಷಯವನ್ನು ತಿಳಿಸಿದರು.
ವಿಜಯ್ ಪುತ್ರನ್ ವಿಚಾರಣೆ ನಡೆಸಿ, ಮಣಿಪಾಲ ಪೋಲೀಸರ ಸಮಕ್ಷಮದಲ್ಲಿ ಸಂಬಂಧಿಸಿದ ವ್ಯಕ್ತಿಗೆ ದಾಖಲೆ ಹಾಗೂ ಚೆಕ್ಕನ್ನು ಮರಳಿ ನೀಡುವಲ್ಲಿ ಸಹಕರಿಸಿದರು. ಪ್ರಾಮಾಣಿಕ ರಿಕ್ಷಾ ಚಾಲಕ ಸತೀಶ್ ಎಂ. ಸುಮಾರು 7 ಲಕ್ಷ ರೂ. ಮೊತ್ತದ ಚೆಕ್ ಹಾಗೂ ಅಮೂಲ್ಯ ಸ್ವತ್ತುಗಳನ್ನು ಸಂಬಂಧಿಸಿದ ವ್ಯಕ್ತಿಗೆ ನೀಡುವ ಮುಖೇನ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ. ಈ ದಾಖಲಾತಿಗಳನ್ನು ನೀಡುವಲ್ಲಿ ಮಣಿಪಾಲ ಠಾಣಾಧಿಕಾರಿ ದೇವರಾಜ್ ಹಾಗೂ ಪಿಎಸ್ಐ ಅಕ್ಷಯ ಕುಮಾರಿ, ಇವರ ಜೊತೆ ರಾಘವೇಂದ್ರ ಸಿ ಎಸ್ ಐ ಹಾಗೂ ಮನೋಹರ್ ಕುಮಾರ್ ಎಎಸ್ಐ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ನಿಲ್ದಾಣದ ಪ್ರಮುಖರಾದ ಸಂಜೀವ್ ಪೂಜಾರಿ, ಅಶ್ರಫ್ ಸಹಕರಿಸಿರುತ್ತಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಪ್ರಯಾಣಿಕರು ಮಣಿಪಾಲ ಮತ್ತು ಪರಿಸರಗಳಲ್ಲಿ ರಿಕ್ಷಾಗಳಲ್ಲಿ ಮರೆತು ಬಿಟ್ಟಿದ್ದ ಮೊಬೈಲ್, ಕ್ಯಾಮೆರಾ, ಪರ್ಸ್, ಅಮೂಲ್ಯ ದಾಖಲಾತಿಗಳು ಇತ್ಯಾದಿಗಳನ್ನು ರಿಕ್ಷಾ ಚಾಲಕರು ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಮರಳಿಸಿದ ಘಟನೆಗಳು ಸಾಕಷ್ಟಿವೆ. ವಿಶ್ವವಿಖ್ಯಾತ ದೇವಸ್ಥಾನಗಳು, ಆಸ್ಪತ್ರೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿರುವ ಉಡುಪಿ – ಮಣಿಪಾಲದಲ್ಲಿ ವಿವಿಧ ದೇಶಗಳವರು ನೆಲೆಸಿದ್ದಾರೆ. ಪ್ರತಿದಿನವೂ ವಿವಿಧ ದೇಶ, ಊರುಗಳಿಂದ ಸಾವಿರಾರು ಮಂದಿ ಆಗಮಿಸುತ್ತಿರುತ್ತಾರೆ. ಇಂತವರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಅಗತ್ಯ ವಾಹನ ಸೌಲಭ್ಯವನ್ನು ಇಲ್ಲಿನ ರಿಕ್ಷಾಗಳವರು ಒದಗಿಸುವುದರಿಂದ ಮಣಿಪಾಲದ ರಿಕ್ಷಾಗಳವರೂ ಭಾರೀ ಜನಪ್ರಿಯತೆ, ಗೌರವ ಗಳಿಸಿದ್ದಾರೆ. ಜೊತೆಗೆ ಇಂತಹ ಪ್ರಾಮಾಣಿಕ ಕಾರ್ಯಗಳು ಇಲ್ಲಿನ ರಿಕ್ಷಾ ಚಾಲಕರ ಗೌರವವನ್ನು ಇನ್ನಷ್ಟು ಹೆಚ್ಚಿಸಿವೆ.