ಡೈಲಿ ವಾರ್ತೆ: 23/Sep/2023
ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್
ಮಂಡ್ಯ: ಕಾವೇರಿ ನದಿ ನೀರು ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮಂಡ್ಯ ಥಿಯೇಟರ್ ಮಾಲೀಕರು ಕೂಡ ಬೆಂಬಲ ಸೂಚಿಸಿದ್ದಾರೆ. ಚಿತ್ರಮಂದಿರಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡಿದರೆ, ರಾಜ್ಯಾದ್ಯಂತ ಚಿತ್ರಮಂದಿರಗಳು ಕೂಡ ಬಂದ್ ಆಗಲಿವೆ.
ಸ್ಯಾಂಡಲ್ ವುಡ್ ನಟ ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯ ಭಾಗದ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರೆ, ನಟ ಅಭಿಷೇಕ್ ಅಂಬರೀಶ್ ನೇರವಾಗಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಂಬರೀಶ್ ಅವರು ತಮ್ಮ ಕೇಂದ್ರ ಮಂತ್ರಿ ಸ್ಥಾನವನ್ನೇ ತ್ಯಜಿಸಿದ್ದರು. ನಂತರ ಮಂಡ್ಯದ ಎಂಪಿ ಆಗಿರುವ ನಟಿ ಸುಮಲತಾ ಅಂಬರೀಶ್ ಕೂಡ ಹಲವು ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೀಗ ಅವರ ಪುತ್ರ ಅಭಿಷೇಕ್ ಕೂಡ ನೇರವಾಗಿ ಹೋರಾಟಕ್ಕೆ ಇಳಿಸಿದ್ದಾರೆ.
ನಟ, ಯುವರಾಜಕಾರಣಿ ನಟ ನಿಖಿಲ್ ಕುಮಾರ್, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರೋ ನಿಖಿಲ್, ‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದು ಬರೆದುಕೊಂಡಿದ್ದಾರೆ.