ಡೈಲಿ ವಾರ್ತೆ: 24/Sep/2023
ಕೋಟ ಪಂಚವರ್ಣದ ಯುವಕ ಮಂಡಲ ವತಿಯಿಂದ 179ನೇ ವಾರದ ಕೊಮೆ ಬೀಚ್ ಸ್ವಚ್ಛತಾ ಅಭಿಯಾನ
ಕೋಟ: ಕೋಟ ಪಂಚವರ್ಣದ ನಿರಂತರ ಸ್ವಚ್ಛತಾ ಅಭಿಯಾನವೇ ಇತರ ಸಂಘಟನೆಗಳಿಗೆ ಪ್ರೇರಣೆ ಎಂದು ಮಾಜಿ ಜಿ.ಪಂ ಸದಸ್ಯ ಟಿ.ಗಣಪತಿ ಶ್ರೀಯಾನ್ ಹೇಳಿದರು.
ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ಹಂದಟ್ಟು ಮಹಿಳಾ ಬಳಗ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ತೆಕ್ಕಟ್ಟೆ ಗ್ರಾಮಪಂಚಾಯತ್ ಘನ ಹಾಗೂ ದ್ರವ ತ್ಯಾಜ್ಯ ಘಟಕ ಇವರುಗಳ ಸಹಯೋಗದೊಂದಿಗೆ 179ನೇ ಭಾನುವಾರ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಮೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಮಾತನಾಡಿ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದು ನಮ್ನೆಲ್ಲರ ಆದ್ಯ ಕರ್ತವ್ಯ ಆದರೆ ಸಮುದ್ರ ಒಡಲನ್ನು ಮಲಿನಗೊಳಿಸುವ ಷ್ಯಡ್ಯಂತರದ ವಿರುದ್ಧ ಹರಿಹಾಯ್ದ ಶ್ರೀಯಾನ್ ಪ್ರಕೃತಿಮಾತೆಯನ್ನು ಪೂಜಿಸುವ ಕಾಲಘಟ್ಟದಲ್ಲಿ ನಾವಿರುವಾಗ ಒಂದಿಷ್ಟು ಕಲ್ಮಶಗಳನ್ನು ಸಮುದ್ರ, ನದಿಗೆ,ಹಳ್ಳ ತೊರೆಗಳಿಗೆ ಎಸೆಯುವ ಕೈಗಳನ್ನು ಕ್ರೂರವಾಗಿ ಟೀಕಿಸಿ ,ಮುಂದಿನ ಭವಿಷ್ಯ ಸಮರ್ಪಕವಾಗಿ ಇರಬೇಕಾದರೆ ಪ್ರಕೃತಿಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಪಂಚವರ್ಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ತೆಕ್ಕಟ್ಟೆ ಗ್ರಾಮಪಂಚಾಯತ್ ಸದಸ್ಯ ಶೇಖರ್ ಕಾಂಚನ್ ಕೊಮೆ ಅಧ್ಯಕ್ಷತೆ ವಹಿಸಿ ಅಭಿಯಾನದಲ್ಲಿ ಭಾಗಿಯಾದರು.
ತೆಕ್ಕಟ್ಟೆ ಗ್ರಾಮಪಂಚಾಯತ್ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ರೇವತಿ ,ಪಂಚವರ್ಣ ಯುವಕ ಮಂಡಲದ ಸಂಘಟನಾಕಾರ್ಯದರ್ಶಿ ಗಿರೀಶ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು,ಕಾರ್ಯದರ್ಶಿ ಲಲಿತಾ ಪೂಜಾರಿ,ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಮತ್ತಿತರರು ಇದ್ದರು.