ಡೈಲಿ ವಾರ್ತೆ: 25/Sep/2023
ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಮರುಳಶಂಕರದೇವರು ಅನುಭಾವ ಯಾತ್ರೆ ಕೃತಿ ಆಯ್ಕೆ
ಬೆಳಗಾವಿ: ಡಾ. ಪಂ. ಪುಟ್ಟರಾಜ ಗುರುವರ್ಯರ ಸಾಹಿತ್ಯ ಸೇವಾ ಸ್ಮರಣೆಗಾಗಿ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ೨೩ ವರ್ಷಗಳಿಂದ ಅರ್ಪಿಸುತ್ತಾ ಬಂದಿರುವ ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಡಾ. ದಯಾನಂದ ಈ. ನೂಲಿ. ಚಿಕ್ಕೋಡಿ ಇವರ ‘ಮರುಳಶಂಕರದೇವರು ಅನುಭಾವ ಯಾತ್ರೆ’ ಕೃತಿ ಆಯ್ಕೆ ಆಗಿದೆ ಎಂದು ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಪ್ರಶಸ್ತಿಯು ೫೦೦೦ ರೂ ನಗದು ಪ್ರಶಸ್ತಿಪತ್ರ ನೆನಪಿನ ಕಾಣಿಕೆ ಶಾಲು ಸತ್ಕಾರ ಗೌರವವನ್ನು ಒಳಗೊಂಡಿದೆ. ದಿನಾಂಕ ೦೧ ಅಕ್ಟೋಬರ್ ೨೦೨೩ ರಂದು ಬೆಳಗಾವಿಯ ಸರಸ್ವತಿ ವಾಚನಲಾಯದಲ್ಲಿ ಹಮ್ಮಿಕೊಂಡಿರುವ ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಗುರು ಭಕ್ತಿ ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯಶ್ರೀ ಮ. ನಿ. ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠ ಬೆಳಗಾವಿ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಾಡಿನ ಗಣ್ಯ ಮಾನ್ಯರು ಸಾಹಿತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇದೇ ಸಂದರ್ಭದಲ್ಲಿ, ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಕೃತಿ ಕರ್ತರಾದ ಕಸ್ತೂರೆಮ್ಮ ಎಸ್. ಹಿರೇಮಠ ಗಜೇಂದ್ರಗಡ, (‘ನುಚ್ಚಿನ ಗಡಿಗೆ’ ಕವನ ಸಂಕಲನ), ಪದ್ಮಾ ಜಯತೀರ್ಥ ಉಮಾರ್ಜಿ ಹುಬ್ಬಳ್ಳಿ, (‘ಮುತ್ತಿನ ಮಂಜು’ ಲೇಖನಿಗಳ ಖಣಿ), ಸುನಿತಾ ಪ್ರಕಾಶ ದಾವಣಗೆರೆ, (‘ಶರಣ್ಯ’ ಕಥಾ ಸಂಕಲನ), ಮೈಲಾರಪ್ಪ ಬೂದಿಹಾಳ ಮುಗಿಲ ಹಕ್ಕಿ ಗಂಗಾವತಿ, (‘ಬಾರೊ ಕಂದ ಶಾಲೆಗೆ’ ಮಕ್ಕಳ ಪದ್ಯಗಳು), ಡಾ. ಗುರುದೇವಿ ಉ. ಹುಲ್ಲೆಪ್ಪನವರಮಠ ಬೆಳಗಾವಿ, (‘ಚಿತ್ಪ್ರಭೆ’ ಚಿಂತನೆಗಳು), ಕವಿತಾ ಸಾಲಿಮಠ ಬಾಗಲಕೋಟೆ, (‘ದರ್ದಿಗೆ ದಾಖಲೆಗಳಿಲ್ಲ’ ಗಜಲ್), ತಾತಾ ಸಾಹೇಬ ಬಾಂಗಿ ಜಮಖಂಡಿ, (‘ಹುತಾತ್ಮ ವೀರಪಾಂಡ್ಯ ಕಟ್ಟುಬೊಮ್ಮು’ ಚರಿತ್ರೆ), ಎಸ್. ಆರ್. ರಾವಳ ತೇರದಾಳ, (‘ಓದಿನೊಳಗಿನ ಸ್ವಾದ’ ಗ್ರಂಥಾವಲೋಕನ ಸಂಗ್ರಹ), ಕೆ. ಚಂದ್ರಮೌಳಿ ಬೆಂಗಳೂರು, (‘ತ್ರಿಪಥ ಗಾಮಿನಿ’ ಅಧ್ಯಯನ) ಡಾ. ಸಿ. ಆರ್. ಗೋಪಾಲ ಸಂಡೂರ (‘ಸಾಮಾಜಿಕ ಕ್ರಿಯಾಚರಣೆ’ ಸಮಾಜ ಕಾರ್ಯದ ಒಂದು ವಿಧಾನ) ಇವರುಗಳಿಗೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ವರ್ಷದ ಶ್ರೇಷ್ಠ ಕೃತಿರತ್ನ ಪ್ರಶಸ್ತಿ ಸಮ್ಮಾನ ನೀಡಿ ಗೌರವಿಸಲಾಗುವುದು ಮತ್ತು ಎರಡು ಮತ್ತು ೩ನೆಯ ಸ್ಥಾನದ ಕೃತಿ ಕರ್ತರಿಗೆ, ನವಂಬರ್ ತಿಂಗಳಲ್ಲಿ ಗದುಗಿನಲ್ಲಿ ನಡೆಯು ನಾಡದೇವಿಗೆ ನಮನ ರಾಜ್ಯೋತ್ಸವ ಸಮಾರಂಭದಲ್ಲಿ ಸಮ್ಮಾನಿಸಲಾಗುವುದು.
ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ಆಯ್ಕೆಗಾಗಿ ರಾಜ್ಯಾಧ್ಯಕ್ಷರಾದ ವೇ. ಚನ್ನವೀರ ಸ್ವಾಮಿ ಹಿರೇಮಠ ಇವರ ನೇತೃತ್ವದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಅನ್ನದಾನಿ ಹಿರೇಮಠ. ನಿವೃತ್ತ ಪ್ರಾಧ್ಯಾಪಕಿ ಡಾ. ಶಕುಂತಲಾ ಸಿಂಧೂರ. ಉಪನ್ಯಾಸಕಿ ಡಾ. ರಶ್ಮಿ ಅಂಗಡಿ. ಮಕ್ಕಳ ಸಾಹಿತಿ ಡಾ. ತಯಬಲಿ ಹೊಂಬಳ ಮತ್ತು ಸೇವಾ ಸಮಿತಿಯ ಎಫ್. ಎ. ಹಿರೇಮಠ ಇವರುಗಳನ್ನು ಒಳಗೊಂಡ ೫ ಜನ ಸದಸ್ಯರ ಸಮಿತಿ ರಚಿಸಲಾಗಿತ್ತು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ತಿಳಿಸಿದ್ದಾರೆ.