ಡೈಲಿ ವಾರ್ತೆ: 27/Sep/2023

ಕುಂದಾಪುರ: ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿದ ಕಠಿಣ ನಿಯಮಗಳನ್ನು ವಿರೋಧಿಸಿ ಲಾರಿ‌ ಮಾಲಕ, ಹಾಗೂ ಚಾಲಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ಕುಂದಾಪುರ: ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿದ ಕಠಿಣ ನಿಯಮಗಳನ್ನು ವಿರೋಧಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಕಟ್ಟಡ ಸಾಮಾಗ್ರಿಗಳ ಸಾಗಾಟ ಬಂದ್ ಮಾಡಿ ಬುಧವಾರ ಕುಂದಾಪುರ ವಲಯದ ಕೋಟೇಶ್ವರ ಹಾಗೂ ಬೈಂದೂರು ವಲಯದ ಹೆಮ್ಮಾಡಿಯಲ್ಲಿ ಉಡುಪಿ ಜಿಲ್ಲಾ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ನೇತೃತ್ವದಲ್ಲಿ ಲಾರಿ‌ ಮಾಲೀಕರು ಹಾಗೂ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ಕುಳಿತಿದ್ದಾರೆ.

ರಾ. ಹೆದ್ದಾರಿಯ ಹೆಮ್ಮಾಡಿ ಪೇಟೆ ಹಾಗೂ ಕೋಟೇಶ್ವರ ರಾ. ಹೆದ್ದಾರಿ ಸಮೀಪದಲ್ಲಿ ನೂರಾರು ಲಾರಿ, ಟೆಂಪೋ ಬದಿಗಿಟ್ಟು ಬೆಳೆಗ್ಗಿನಿಂದ ಪ್ರತಿಭಟನೆ ನಡೆಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಕುಂದಾಪುರ ಪೊಲೀಸ್ ನಿರೀಕ್ಷಕರು ಭೇಟಿ ನೀಡಿದರು.

ಅಧ್ಯಕ್ಷರ ಮಾತು

ಮಾಧ್ಯಮದವರೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ‌ಮುಖಂಡ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಲಾರಿ ಚಾಲಕರು, ಮಾಲಕರಿಗೆ ಸಮಸ್ಯೆಯಾಗಿದ್ದು ನೈತಿಕ ಬೆಂಬಲ ನೀಡಲಾಗಿದೆ. ಜಿಲ್ಲೆಯ ಪ್ರಾಕೃತಿಕ ವ್ಯವಸ್ತೆ ಹಿನ್ನೆಲೆ ಯಾವುದೇ ವಾಹನಗಳನ್ನು ಒಂದಷ್ಟು ದಿನ ನಿಲ್ಲಿಸಿದರೆ ಅದು ಗುಜರಿ ಸೇರುತ್ತದೆ. ರೋಡ್ ಟ್ಯಾಕ್ಸ್, ಚಾಲಕರ ಸಂಬಳ, ವಾಹನ ಸಾಲದ ಕಂತು ಕಟ್ಟುವ ಜೊತೆ ಮನೆ ನಿರ್ವಹಣೆ ಮಾಡಬೇಕಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಅಶೋಕ್ ಪೂಜಾರಿ ಬೀಜಾಡಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ವಿನೋದ್, ಪ್ರಕಾಶ್ ಪೂಜಾರಿ, ಗುಣಕರ ಶೆಟ್ಟಿ, ಶಿವರಾಮ್ ಕುಂದರ್, ಸತೀಶ್ ಪೂಜಾರಿ, ಪಾಂಡುರಂಗ ಜೋಗಿ, ಅಮೀರ್, ಸುರೇಶ್, ಶ್ರೀಧರ್ ಬಿ, ಉಮೇಶ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.