ಡೈಲಿ ವಾರ್ತೆ: 27/Sep/2023

ಕೋಟ : ತೀವ್ರಗೊಳಿಸಿದ ಲಾರಿ ಮಾಲಕರ ಮತ್ತು ಚಾಲಕರ ಹೋರಾಟ -ದೊಂದಿ ಬೆಳಕಿನೊಂದಿಗೆ ಪ್ರತಿಭಟನೆ, ಸ್ಥಳಕ್ಕೆ ಶಾಸಕರುಗಳು ಭೇಟಿ

ಕೋಟ: ಕಟ್ಟಡ ಸಾಮಾಗ್ರಿಗಳನ್ನು ಹೊತ್ತೊಯ್ಯುವ ಲಾರಿಗಳು ಕಾನೂನು ಬದ್ಧವಾಗಿ ಸಾಗಾಟ ಮಾಡಬೇಕು ಎಂಬ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಕೋಟ ವಲಯದ ಲಾರಿ ಮಾಲಕರು ಹಾಗೂ ಚಾಲಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಕೋಟ ಮೂರ್‍ಕೈ ಬಳಿ ಠಿಕಾಣಿ ಹೂಡಿದ್ದ ಲಾರಿ ಮಾಲಕರು ಹಾಗೂ ಚಾಲಕರು ಅನಿರ್ದಿಷ್ಟವಾವಧಿಯ ಮುಷ್ಕರಕ್ಕೆ ಕರೆ ನೀಡಿ ಜಿಲ್ಲಾಡಳಿತ ಕ್ರಮವನ್ನು ಖಂಡಿಸಿದ್ದಾರೆ.

ರಸ್ತೆಗಿಳಿಯದ ಲಾರಿಗಳು ಕಳೆದೊಂದು ವಾರದಿಂದ ಲಾರಿಗಳನ್ನು ರಸ್ತೆಗಿಳಿಸದೆ ಪ್ರತಿಭಟಿಸುತ್ತಿರುವ ಹಿನ್ನಲ್ಲೆಯಲ್ಲಿ ಲಾರಿ ಮಾಲಕರು ಬುಧವಾರ ತಮ್ಮ ಎಲ್ಲಾ ಲಾರಿಗಳನ್ನು ಕೋಟ ಹೈಸ್ಕೂಲ್ ನಿಂದ ಕೋಟದವರೆಗೆ ರಸ್ತೆ ಸನಿಹ ಸಾಲು ಸಾಲಾಗಿ ನಿಲ್ಲಿಸಿ ತಮ್ಮ ಹೋರಾಟ ಕಾವಿಗೆ ಮುನ್ನಡಿ ಬರೆದು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ, ಶಾಸಕರು ಭೇಟಿ :
ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಮುಖಂಡರಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ,ಸ್ಥಳೀಯ ನ್ಯಾಯವಾದಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.
ಇತ್ತ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲುಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ಸಭೆ ಅಯೋಜಿಸಲು ಸೂಚಿಸಿದ್ದಾರೆ.

ಕೇಸು ದಾಖಲಿಸದಿರಿ:
ನಮ್ಮ ಲಾರಿಗಳು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವುದರಿಂದ ನಮ್ಮ ಲಾರಿಗಳ ಮೇಲೆ ಕೇಸು ದಾಖಲಿಸದಂತೆ ಲಾರಿ ಮಾಲಕರು ಆಗ್ರಹಿಸಿದ್ದಾರೆ.

ಪ್ರತಿಭಟನೆ ವಿಡಿಯೋ ವೀಕ್ಷಿಸಿ

ದೊಂದಿ ಬೆಳಕಿನೊಂದಿಗೆ ಪ್ರತಿಭಟನೆ:
ಬುಧವಾರ ರಾತ್ರಿ ಕೋಟ ವಲಯದ ಲಾರಿ ಮಾಲಕರು ಹಾಗೂ ಚಾಲಕರು ದೊಂದಿ ಬೆಳಕಿನೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಹೋರಾಟಗಾರ ಪರವಾಗಿ ಭೋಜ ಪೂಜಾರಿ, ಜನಾರ್ದನ ಪೂಜಾರಿ, ವಿನೋದ್ ದೇವಾಡಿಗ ಹಾಗೂ ಹಲವಾರು ಲಾರಿ ಮಾಲಕರು, ಚಾಲಕರು ಭಾಗಿಯಾಗಿದ್ದರು.