ಡೈಲಿ ವಾರ್ತೆ: 29/Sep/2023
ಕಾವೇರಿ ತವರು ಕೊಡಗಿನಲ್ಲೇ ತಟ್ಟದ ಬಂದ್ ಬಿಸಿ – ಜನಜೀವನ ಎಂದಿನಂತೆ ಸಾಮಾನ್ಯ, ಎಲ್ಲವೂ ಓಪನ್
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್ ಆಚರಣೆ ನಡೆಯುತ್ತಿದ್ದು, ಇಡೀ ರಾಜ್ಯವೇ ಸ್ತಬ್ಧವಾಗಿದೆ. ಆದರೆ, ಕೊಡಗು ಜಿಲ್ಲೆ ಮಾತ್ರ ಇದಕ್ಕೆ ಹೊರತಾಗಿದೆ. ಏಕೆಂದರೆ, ಕೊಡಗಿನಲ್ಲಿ ಯಾವುದೇ ಬಂದ್ ನಡೆಯುತ್ತಿಲ್ಲ. ಮಾಮೂಲಿಯಂತೆಯೇ ಈ ದಿನವೂ ನಡೆಯುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಬಂದ್ಗೆ ಬೆಂಬಲ ಕೊಟ್ಟಿಲ್ಲ. ಎಂದಿನಂತೆ ವಾಹನ ಸಂಚಾರವಿದೆ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಸಂಚಾರ ಮಾಡುತ್ತಿವೆ. ಶಾಲಾ-ಕಾಲೇಜುಗಳು ಸಹ ಎಂದಿನಂತೆ ನಡೆಯುತ್ತಿವೆ. ಅಂಗಡಿ-ಮುಂಗಟ್ಟುಗಳು ಎಲ್ಲ ತೆರೆದಿವೆ. ಜನಜೀವನ ಎಂದಿನಂತೆ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆಗಳು ಸಹ ಇಲ್ಲ.
ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್ ಆಚರಿಸಲಾಯಿತು. ಯಶಸ್ವಿಯೂ ಆಯಿತು. ಇಂದು ಅಖಂಡ ಕರ್ನಾಟಕ ಬಂದ್ ಆಚರಣೆ ಆರಂಭವಾಗಿದೆ. ಸಂಚಾರ ಸಹ ವಿರಳವಾಗಿದೆ. ಇಂದಿನ ಬಂದ್ ಪರಿಣಾಮ ಹೆಚ್ಚಾಗಿರಲಿದೆ.
ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ಇಂದಿನ ಕರ್ನಾಟಕ ಬಂದ್ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ರಸ್ತೆಗಿಳಿಯೂ ಮುನ್ನ ಎಚ್ಚರ
ಇಂದು ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯಲಿದೆ. ಅದರಲ್ಲಿ ರಸ್ತೆ ತಡೆಯೇ ಪ್ರಮುಖವಾಗಿರಲಿದ್ದು, ಎಲ್ಲ ಹೆದ್ದಾರಿಗಳನ್ನು ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ಪ್ಲಾನ್ ಮಾಡಿವೆ. ಹೀಗಾಗಿ ರಸ್ತೆಗಿಳಿಯುವ ಮುನ್ನ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಪ್ರತಿಭಟನೆಯ ನಡುವೆ ಸಿಲುಕಿ ಪರದಾಡಬೇಕಾಗುತ್ತದೆ.