ಡೈಲಿ ವಾರ್ತೆ: 06/OCT/2023
ಲಕ್ಷ್ಮೇಶ್ವರ:ಸಸ್ಯ ಶ್ಯಾಮಲಾ ಕಾರ್ಯಕ್ರಮಕ್ಕೆ ಚಾಲನೆ
ಲಕ್ಷ್ಮೇಶ್ವರ:ಇತ್ತೀಚೆಗೆ ಹೆಚ್ಚು ಅರಣ್ಯ ನಾಶವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅರಣ್ಯ ನಾಶವಾದಷ್ಟೂ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆವತಿಯಿಂದ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಮ್ ಮುಂದಿನಮನಿ ಅವರ ನಿರ್ದೇಶನದಂತೆ ಲಕ್ಷ್ಮೇಶ್ವರ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸಾಪೂರದಲ್ಲಿ ಸಸ್ಯ ಶ್ಯಾಮಲಾ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷರಾದ ಡಿ ಎಚ್ ಪಾಟೀಲ್ ಅವರು ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿ ಆರ್ ಪಿ ಬಸವರಾಜ ಎಮ್ ಯರಗುಪ್ಪಿ ಮಾತನಾಡಿ, ಪರಿಸರವಿದ್ದರೆ ಮಾತ್ರ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯ. ಪರಿಸರ ಸಂರಕ್ಷಣೆ ವಿಷಯದಲ್ಲಿ ವಿದ್ಯಾರ್ಥಿಗಳ ಮೇಲೂ ಹೆಚ್ಚಿನ ಜವಾಬ್ದಾರಿಯಿದೆ. ಶಾಲೆಯಲ್ಲಿ ಪ್ರತಿ ಮಕ್ಕಳೂ ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದರು.
ಶಾಲಾ ಮಕ್ಕಳ ಹಾಜರಾತಿ ಹಾಗೂ ಸ್ಥಳಾವಕಾಶ ಆಧರಿಸಿ ನಮ್ಮ ಶಾಲಾ ಆವರಣದಲ್ಲಿ ನೆಟ್ಟ ಗಿಡಗಳಿಗೆ ವಿದ್ಯಾರ್ಥಿಗಳು ಪ್ರತಿ ದಿನ ನೀರು ಹಾಕಬೇಕು. ಅವುಗಳ ರಕ್ಷಣೆಯ ಉಸ್ತುವಾರಿಯನ್ನು ಮಕ್ಕಳಿಗೆ ಹಂಚಿಕೆ ಮಾಡಲಾಗುವುದು. ಸತತ ಮೂರು ವರ್ಷ ಗಿಡಗಳ ಪೋಷಣೆ ಮಾಡಬೇಕು. ಚೆನ್ನಾಗಿ ಗಿಡ ಬೆಳೆಸಿದ ಮಕ್ಕಳಿಗೆ ಶಾಲೆಯಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಕ ರಾ ಸ ನೌ ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ್, ಪ್ರಧಾನ ಗುರುಗಳಾದ ಐ ಎಸ್ ನೇಕಾರ, ಬಿ ಆರ್ ಪಿ ಯವರಾದ ಬಿ ಎಮ್ ಯರಗುಪ್ಪಿ, ಶಿಕ್ಷಕರಾದ ಜಿ ಎಸ್ ಗುಡಗೇರಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.