ಡೈಲಿ ವಾರ್ತೆ: 06/OCT/2023

ಕುಂದಾಪುರ: ಬನ್ಸ್ ರಾಘು ಹತ್ಯೆ ಪ್ರಕರಣ – ಆರೋಪಿಗಳಾದ ಶಫಿವುಲ್ಲಾ , ಇಮ್ರಾನ್ ಬಂಧನ

ಕುಂದಾಪುರ: ಕುಂದಾಪುರದ ರಾಘವೇಂದ್ರ ಶೇರುಗಾರ್ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಕೊಲೆಗಾರರನ್ನು ಬಂಧಿಸಿದ್ದಾರೆ.

ಶಫಿವುಲ್ಲಾ (40) ಮತ್ತು ಇಮ್ರಾನ್ (43) ಬಂಧಿತ ಆರೋಪಿಗಳು.
ಇಬ್ಬರು ಆರೋಪಿಗಳು ಶಿವಮೊಗ್ಗ ಮೂಲದವರಾಗಿದ್ದು, ಅ. 1ರಂದು ಕುಂದಾಪುರದಲ್ಲಿ ರಾಘು ಅವರಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದರು. ಗಂಭೀರ ಗಾಯಗೊಂಡ ರಾಘವೇಂದ್ರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.

ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರಾದ ಕುಂದಾಪುರ ಠಾಣೆ ನಿರೀಕ್ಷಕ ನಂದಕುಮಾರ್, ಅಪರಾಧ ವಿಭಾಗದ ಪಿಎಸ್ಐ ಪ್ರಸಾದ್, ಪಿಎಸ್ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಮೊದಲಿಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು 2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.