ಡೈಲಿ ವಾರ್ತೆ: 11/OCT/2023

ಚೈತ್ರಾ & ಗ್ಯಾಂಗ್‍ನಿಂದ ಟಿಕೆಟ್ ವಂಚನೆ ಪ್ರಕರಣ – ವಜ್ರದೇಹಿ ಸ್ವಾಮೀಜಿಗೆ ನೊಟೀಸ್

ಮಂಗಳೂರು : ಉದ್ಯಮಿ ಗೋವಿಂದಬಾಬುಗೆ ಬೈಂದೂರು ವಿಧಾನಸಭಾ ಕೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡುವುದಾಗಿ ಐದು ಕೋಟಿ ರೂ. ವಂಚಿಸಿದ ಪ್ರಕರಣ ತನಿಖೆ ಮುಂದುವರಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರಿಗೆ ನೋಟಿಸ್‌ ನೀಡಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಎಸಿಪಿ ರೀನಾ ಸುವರ್ಣ ಸ್ವಾಮೀಜಿಗೆ ನೋಟಿಸ್‌ ಪ್ರತಿ ಕಳುಹಿಸಿದ್ದಾರೆ. ನೋಟಿಸ್‌ ತಲುಪಿದ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ವಜ್ರದೇಹಿ ಸ್ವಾಮೀಜಿ, ಕುಂದಾಪುರದ ಚೈತ್ರಾ ವಂಚನೆ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಜತೆಗೆ, ಅವರು ಯಾರಿಗೆಲ್ಲ ವಂಚನೆ ಮಾಡಿದ್ದಾರೆಂಬ ಮಾಹಿತಿ ನನ್ನ ಬಳಿ ಇದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಈ ವಿಚಾರ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹೀಗಾಗಿ ಆಕೆಯ ವಂಚನೆ ಹಾಗೂ ಹಣಕಾಸಿನ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ವಜ್ರದೇಹಿ ಸ್ವಾಮೀಜಿಗೆ ನೋಟಿಸ್‌ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಗೆ ಹಾಜರಾಗುವೆ: ಸ್ವಾಮೀಜಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಸಿಸಿಬಿಯವರಿಂದ ನೋಟಿಸ್‌ ಬಂದಿದೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.