ಡೈಲಿ ವಾರ್ತೆ: 13/OCT/2023
5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಐಟಿ ಅಧಿಕಾರಿ
ಬೆಳಗಾವಿ: ಚಿನ್ನಾಭರಣದ ಅಂಗಡಿ ಮಾಲೀಕನಿಂದ 5 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿಯೊಬ್ಬನನ್ನು ರೆಡ್‍ಹ್ಯಾಂಡ್ ಆಗಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಐಟಿ ಅಧಿಕಾರಿ ಅವಿನಾಶ್ ಟೊನಪೆ ಎಂಬಾತ ಚಿಕ್ಕೋಡಿಯ ಅಂಕಲಿಯ ಪರಶುರಾಮ್ ಬಂಕಾಪುರ ಎಂಬವರ ಬಳಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪರಶುರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಯೋಜನೆ ರೂಪಿಸಿದ್ದ ಪೊಲೀಸರು, ಖಾಸಗಿ ಡೆಂಟಲ್ ಕಾಲೇಜ್ ಮೈದಾನದಲ್ಲಿ ಅಧಿಕಾರಿ ಹಣ ಪಡೆಯುತ್ತಿದ್ದ ವೇಳೆ ಸಿನಿಮೀಯ ರೀತಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಅಧಿಕಾರಿಯನ್ನು ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿ ಅವಿನಾಶ್ ಟೋನಪಿ ನೇತೃತ್ವದ ತಂಡ ಅಂಕಲಿ ಗ್ರಾಮದಲ್ಲಿರುವ ಬಂಕಾಪುರ ಚಿನ್ನದಂಗಡಿ ಮೇಲೆ ದಾಳಿ ಮಾಡಿತ್ತು. ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.