ಡೈಲಿ ವಾರ್ತೆ: 14/OCT/2023
ಉಡುಪಿ ಜಿಲ್ಲೆಯಲ್ಲಿ ಮಹಿಷಾ ದಸರಾಗೆ ನಿರ್ಬಂಧ: ಎರಡು ದಿನ ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ ಆದೇಶ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಹಿಷಾ ದಸರಾ ನಡೆಸಲು ಮುಂದಾಗಿರುವವರಿಗೆ ಉಡುಪಿ ಜಿಲ್ಲಾಧಿಕಾರಿ ಶಾಕ್ ಕೊಟ್ಟಿದ್ದು, ಮಹಿಷಾ ದಸರಾಗೆ ಸಂಬಂಧಿಸಿದಂತೆ ಪರ /ವಿರೋಧ ಯಾವುದೇ ರೀತಿಯ ಪ್ರತಿಭಟನ ಮೆರವಣಿಗೆ, ಮತ್ತು ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ ಗಳನ್ನು ಅಳವಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ದಿನಾಂಕ:14.10.2023 ಮತ್ತು 15.10.2023 ರಂದು ಉಡುಪಿ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಗುವುದರಿಂದ ಮಹಿಷ ದಸರ ಪರ /ವಿರೋಧ ಯಾವುದೇ ರೀತಿಯ ಪ್ರತಿಭಟನ ಮೆರವಣಿಗೆ, ಮತ್ತು ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ ಗಳನ್ನು ಅಳವಡಿಸುವುದನ್ನು ನಿಷೇಧಿಸಿದ್ದಾರೆ. ಅಲ್ಲದೆ ಕೆ.ಪಿ. ಆಕ್ಟ್ 1963ರ ಕಲಂ 35 ರಡಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ದಿನಾಂಕ: 14.10.2023 ಬೆಳಿಗ್ಗೆ 6.00 ರಿಂದ ಜಾರಿಗೆ ಬರುವಂತೆ ಹಾಗೂ ದಿನಾಂಕ: 15.10.2023 ರ ಸಂಜೆ 06.00 ಗಂಟೆಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ನಿಬಂಧನೆಗಳು:
ಮಹಿಷ ದಸರ ಆಚರಣೆ ಪರ ವಿರೋಧದದ ಬಗ್ಗೆ ಯಾವುದೇ ಪೋಸ್ಟರ್, ಬ್ಯಾನರ್, ಬಂಟಿಂಗ್ ಅಳವಡಿಸುವುದು ಪ್ರತಿಭಟನ / ಮರವಣಿಗೆಗಳನ್ನು ಅವಹೇಳನಕಾರಿಯಂತಹ ಯಾವುದೇ ಘೋಷಣೆಗಳು/ಭಾಷಣಗಳು ಪ್ರಕಟಣೆಗಳು, ಅವಾಚ್ಯ ಶಬ್ದಗಳ ಬಳಕೆ/ಪುಚೋದನಾಕಾರಿ ಭಾಷಣ/ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ.
ಶಸ್ತ್ರಗಳು, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಅಲ್ಲದೆ ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದು ನಿಷೇಧಿಸಿದೆ. ಪುಚೋದಿಸಬಹುದಾದದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಪುಯೋಗ ಮಾಡುವುದು, ಮತ್ತು ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಅಥವಾ ಇತರ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.