ಡೈಲಿ ವಾರ್ತೆ: 22/OCT/2023
ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್: ಚೈತ್ರಾ & ಗ್ಯಾಂಗ್ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ.!
ವಿಜಯನಗರ: ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದರೂ ಬಿಜೆಪಿ ಟೆಕೆಟ್ ಹೆಸರಲ್ಲಿ ನಡೆದ ವಂಚನೆ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ.
ಇದೀಗ ಹಗರಿಬೊಮ್ಮನಹಳ್ಳಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿವೃತ್ತ ಇಂಜಿನಿಯರ್ ಶಿವಮೂರ್ತಿ ಎಂಬವರಿಗೆ 2 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಚೈತ್ರಾ ಪ್ರಕರಣದ ಮಾದರಿಯಲ್ಲೇ ವಂಚನೆ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಲ್ಲಿದ್ದ ಅವರಿಗೆ ಬಿಜೆಪಿ ನಾಯಕರು ಪರಿಚಯ ಮಾಡಿಕೊಂಡು ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಬಿಜೆಪಿ ಮುಖಂಡರ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಮಾಜಿ ಮುಖಂಡ ಮತ್ತು ಹಾಲಿ ಕೆಆರ್‌ಪಿಪಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಪ್ಪ ಹಗರಿಬೊಮ್ಮನ ಟಿಕೆಟ್ ಕೊಡಿಸುವ ನೆಪದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪರಿಚಯ ಮಾಡಿಸುತ್ತಾರೆ. ಟಿಕೆಟ್‍ಗಾಗಿ ಹಣ ನೀಡಬೇಕೆಂದು ಹೇಳಿ ರೇವಣ್ಣ ಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಎಂಬಾತ ಹಂತ ಹಂತವಾಗಿ ಎರಡು ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.
ಚುನಾವಣೆ ವೇಳೆ ಟಿಕೆಟ್ ಬ್ಯಾಲ ಹುಣಸಿ ರಾಮಣ್ಣ ಅವರಿಗೆ ಸಿಗುತ್ತದೆ. ಈ ವೇಳೆ ಆಕ್ರೋಶಗೊಂಡ ಶಿವಮೂರ್ತಿ ಹಣ ವಾಪಸ್ ಕೇಳಿದ್ದರು. ಆಗ ವಾಗ್ವಾದ ನಡೆದು ಗಲಾಟೆಯಾಗಿತ್ತು. ಆರಂಭದಲ್ಲಿ ಮರ್ಯಾದೆಗೆ ಅಂಜಿ ವಿಷಯ ಬಹಿರಂಗಪಡಿಸದೆ ಸುಮ್ಮನಿದ್ದರು. ಬಳಿಕ ಕೊಟ್ಟೂರಿನ ಕೆಲವು ಪ್ರಮುಖರು ರಾಜಿ ಪಂಚಾಯಿತಿ ಮಾಡಿ ವಿಚಾರ ಮುಚ್ಚಿಡಲು ಯತ್ನಿಸಿದ್ದಾರೆ.
ಇದೀಗ ಮೂರು ತಿಂಗಳಾದರೂ ಹಣ ವಾಪಾಸ್ ನೀಡಿಲ್ಲ.
ನೀಡಿದ್ದ ಎರಡು ಚೆಕ್‍ಗಳೂ ಬೌನ್ಸ್ ಆಗಿವೆ. ಇದೇ ಕಾರಣಕ್ಕೆ ಶಿವಮೂರ್ತಿ, ಇದೀಗ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ದೂರನ್ನು ನೀಡಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಸಿದ್ದಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಪೊಲೀಸರು ಕೂಡ ಅವರನ್ನು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ.