ಡೈಲಿ ವಾರ್ತೆ: 28/OCT/2023
ಮಂಗಳಾ ಕ್ರೀಡಾಂಗಣ : ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟ ಸಮಾರೋಪ
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕಾಗಿ ನಾನು ಶಾಸಕನಿದ್ದಾಗ ಸಾಕಷ್ಟು ಶ್ರಮ ವಹಿಸಿದ್ದೇನೆ. ಇದಕ್ಕಾಗಿ ಬೆಂಜನಪದವಿನಲ್ಲಿ ಖಾಸಗಿ ವ್ಯಕ್ತಿಗಳಿಂದ ಪಡೆದ ಸ್ಥಳ ಹಾಗೂ ಸರಕಾರಿ ಸ್ಥಳ ಸೇರಿ ಒಂಭತ್ತೂ ಕಾಲು ಎಕರೆ ಜಾಗವನ್ನು ತಾಲ್ಲೂಕು ಕ್ರೀಡಾಂಗಣಕ್ಕಾಗಿ ಮೀಸಲಿಡಲಾಗಿದೆ. ಎಂದು ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ಬಿ.ರಮಾನಾಥ ರೈ ಅವರು ಹೇಳಿದರು.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ 2023 – 24 ನೇ ಸಾಲಿನ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು
ಕ್ರೀಡೆ ಎನ್ನುವುದು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ. ವ್ಯಕ್ತಿತ್ವದ ವಿಕಸನವಾಗಲು ಕ್ರೀಡೆ ಮೂಲ ಸಾಧನವಾಗಿದೆ ಎಂದರು.
ಕ್ರೀಡಾಕೂಟದ ಯಶಸ್ವಿನ ರೂವಾರಿಗಳಾದ ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ಬಂಟ್ವಾಳ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಅಧೀಕ್ಷಕ ಅಬ್ದುಲ್ ಕಬೀರ್, ಖ್ಯಾತ ಜ್ಯೋತಿಷಿ ಹಾಗೂ ತುಂಬೆ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಅನಿಲ್ ಪಂಡಿತ್ ಇವರನ್ನು ಸನ್ಮಾನಿಸಲಾಯಿತು.
ಮುಂದಿನ ಶೈಕ್ಷಣಿಕ ವರುಷದ ಕ್ರಿಡಾ ಕೂಟವನ್ನು ನಡೆಸಲು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಬೊಂಡಾಲ ಇಲ್ಲಿನ ಚಿತ್ರಕಲಾ ಶಿಕ್ಷಕ ದೇವದಾಸ್ ಇವರಿಗೆ ತಾಲ್ಲೂಕು ದೈಹಿಕ ಶಿಕ್ಷಣ ಕ್ರೀಡಾಧಿಕಾರಿ ಕ್ರೀಡಾ ಧ್ವಜವನ್ನು ಹಸ್ತಾಂತರ ಮಾಡಿದರು.
ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್,
ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ, ಶಿವಪ್ರಸಾದ್ ಶೆಟ್ಟಿ, ನವೀನ್ ಪಿ.ಎಸ್., ಅಖಿಲ್ ಶೆಟ್ಟಿ, ರತ್ನಾವತಿ, ರಾಜೇಂದ್ರ ರೈ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ, ತುಂಬೆ ವಿದ್ಯಾ ಸಂಸ್ಥೆಯ ಪಿ.ಟಿ.ಎ.ಅಧ್ಯಕ್ಷ ನಿಸಾರ್ ಅಹಮದ್, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಗೋಪಾಲಕೃಷ್ಣ ತುಂಬೆ, ಅಬ್ದುಲ್ ಗಫೂರ್, ಕಲಾವಿದ ಸದಾಶಿವ ಡಿ.ತುಂಬೆ, ಪ್ರವೀಣ್ ಬಿ.ತುಂಬೆ, ಇಸಾಕ್, ಇಮ್ತಿಯಾಝ್, ಶರೀಫ್, ಇರ್ಫಾನ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ, ಮುಖ್ಯ ಶಿಕ್ಷಕಿ ವಿದ್ಯಾ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಕಾರ್ಯಕ್ರಮ ನಿರೂಪಿಸಿದರು.