ಡೈಲಿ ವಾರ್ತೆ: 30/OCT/2023
ಉಜಿರೆ: ಕ್ಷುಲ್ಲಕ ವಿಚಾರಕ್ಕೆ ಅಪ್ಪ ಮಗನ ಜಗಳ – ಮಗ ಕೊಲೆಯಲ್ಲಿ ಅಂತ್ಯ!
ಬೆಳ್ತಂಗಡಿ :ಕ್ಷುಲ್ಲಕ ವಿಚಾರಕ್ಕೆ ಅಪ್ಪ ಮಗನಿಗೆ ನಡೆದ ಜಗಳದಿಂದ ಮಗ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಅ. 29 ರಂದು ಭಾನುವಾರ ರಾತ್ರಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75) ಅವರ ಪುತ್ರ ಜಗದೀಶ್(30) ಎಂದು ತಿಳಿದುಬಂದಿದೆ.
ಆರೋಪಿ ತಂದೆ ಕೃಷ್ಣಯ್ಯ ಆಚಾರ್ ಚೂರಿಯಿಂದ ಇರಿದು ಮಗನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಅ.29 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ(75) ಮಲಗಿದ್ದ ಸಂದರ್ಭ ಮಗ ಜಗದೀಶ್ ಆಚಾರಿ(31) ನಡುವೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದು, ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕೋಪಗೊಂಡ ಅಪ್ಪ ಕೃಷ್ಣಯ್ಯ ತನ್ನ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ. ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ತಂದೆ ಇರಿದಿದ್ದು, ಇರಿತಕ್ಕೆ ಒಳಗಾಗಿ ಕುಸಿದು ಬಿದ್ದ ಜಗದೀಶ್ ಅನ್ನು ತಕ್ಷಣವೇ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಈ ಸಂದರ್ಭ ಜಗದೀಶ್ ಆಚಾರಿ ಮೃತಪಟ್ಟಿದ್ದಾರೆ. ಇನ್ನು ಮಗನನ್ನು ಕೊಲೆ ಮಾಡಿದ ತಂದೆ ಕೃಷ್ಣಯ್ಯ ಅಚಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.