ಡೈಲಿ ವಾರ್ತೆ: 30/OCT/2023

ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲಿ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು

ದಕ್ಷಿಣ ಕನ್ನಡ: ಕಳೆದ ನಾಲ್ಕು ವರ್ಷಗಳ ಹಿಂದೆ ಕಾಫಿಡೇ ಮಾಲೀಕ ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿಯೇ ಇಂದು ಮತ್ತೊಬ್ಬ ಉದ್ಯಮಿ ತನ್ನ ಕಾರನ್ನು ನಿಲ್ಲಿಸಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ.

ಕಾಫಿಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆ ಬೆನ್ನಲ್ಲಿಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಪಕ್ಕದಲ್ಲಿರುವ ಸೇತುವೆಯ ಆಚೆ-ಈಚೆ ಬೇಲಿಯನ್ನು ನಿರ್ಮಾಣ ಮಾಡಲಾಗಿತ್ತು. ತಂತಿ ಬೇಲಿ ಹಾಗೂ ತಡೆಗೋಡೆ ನಿರ್ಮಾಣ ಮಾಡಿದರೂ ಅದನ್ನು ಮುರಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ.

ಸೋಮವಾರ ಮಧ್ಯಾಹ್ನ ಉದ್ಯಮಿಯೊಬ್ಬ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಶರಣಾದ ಯುವಕ ಚಿಕ್ಕಮಗಳೂರಿನ ಗೋಕುಲ್ ಫಾರ್ಮ್‌ ನಿವಾಸಿ ಬಿ ಎಸ್ ಶಂಕರ್ ಗೌಡರವರ ಪುತ್ರ ಪ್ರಸನ್ನ (37) ಎಂದು ತಿಳಿದು ಬಂದಿದೆ.

ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.