ಡೈಲಿ ವಾರ್ತೆ: 30/OCT/2023

ದಕ್ಷಿಣ ಕನ್ನಡ: ವರದಕ್ಷಿಣೆ ಕಿರುಕುಳ – ವಿವಾಹಿತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ!

ಬಂಟ್ವಾಳ : ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ನವ ವಿವಾಹಿತೆಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,‌ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22) ಮೃತಪಟ್ಟ ಮಹಿಳೆ.
ನೌಸೀನ್ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹ ವಾಗಿದ್ದರು.

ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಕೆ.ಎಮ್ ಬಾವ ಅವರ ಮಗಳು ನೌಸೀನ್ ಅವರು ಉಳ್ಳಾಲ ಮೂಲದ ಅಜ್ಮಾನ ಎಂಬಾತನೊಂದಿಗೆ
ಇನ್ಸ್ಟಾ ಗ್ರಾಂ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮುಖಾಂತರ ಅಗಸ್ಟ್ 14 ರಂದು ಇವರ ಮದುವೆಯಾಗಿತ್ತು.

ಇದು ಪ್ರೇಮ ವಿವಾಹವಾಗಿದ್ದರೂ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನವನ್ನು ಉಡುಗೂರೆಯಾಗಿ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಲವ್ ಮಾಡಿ ಮದುವೆಯಾದರಿಂದ ಒಳ್ಳೆ ಹುಡುಗಿ ಸಿಗಲಿಲ್ಲ, ಇಲ್ಲದಿದ್ದರೆ ಒಳ್ಳೆಯ ಹುಡುಗಿ ಸಿಗಬಹುದಿತ್ತು ಎಂದು ಅತ್ತೆ ಝೂಬೈದಾ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿದ್ದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದರು. ಈ ಕಾರಣಕ್ಕಾಗಿ ತಂಗಿ ಉಳ್ಳಾಲದ ಗಂಡನ ಮನೆಯಿಂದ ಸಜೀಪದ ತಾಯಿ ಮನೆಗೆ ಬಂದಿದ್ದಳು. ಮಾನಸಿಕವಾಗಿ ನೊಂದಿದ್ದ ನೌಸೀನ ಆ.25 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮೃತೆಯ ಸಹೋದರ ನಾಸೀರ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.