ಡೈಲಿ ವಾರ್ತೆ: 17/NOV/2023

ಇಂಡೋ-ಆಸೀಸ್‌ ರೋಚಕ ಫೈನಲ್‌ ವೀಕ್ಷಿಸಲಿದ್ದಾರೆ ಮೋದಿ

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿರುವ ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗುವ ನಿರೀಕ್ಷೆಯಿದೆ.

ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರೋಚಕ ಪಂದ್ಯ ವೀಕ್ಷಿಸಲು 1.30 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ. ಈ ವೇಳೆ ಹಲವಾರು ಗಣ್ಯರು ಮೈದಾನಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಗಣ್ಯರೊಂದಿಗೆ ಫೈನಲ್‌ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಹೇಳಲಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೂ ಮುನ್ನ ನಡೆದ ಬಾರ್ಡರ್‌ ಗವಾಸ್ಕರ್‌ ಸರಣಿಯ 4ನೇ ಟೆಸ್ಟ್‌ ಪಂದ್ಯವನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ 8ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ರೋಚಕ ಕದನ ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅಂದು ವಿಶ್ವಕಪ್‌ಗೆ (ICC World Cup) ಮತ್ತಷ್ಟು ರಂಗು ತರಲು ಹಲವು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.

ಏನೇನು ವಿಶೇಷ..?
ನವೆಂಬರ್‌ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಪಡೆಯು ವಿಶೇಷ ಏರ್‌ ಶೋ ಪ್ರದರ್ಶನ ನಡೆಸಿಕೊಡಲಿದೆ. ಇದರೊಂದಿಗೆ ಖ್ಯಾತ ಬಾಲಿವುಡ್‌ ತಾರೆಯರು ಮೋದಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ತರಲಿದ್ದಾರೆ. ನೃತ್ಯ, ಸಂಗೀತ, ವಿಶೇಷ ಲೈಟಿಂಗ್‌ ಶೋ ಕಾರ್ಯಕ್ರಮಗಳು ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.