ಡೈಲಿ ವಾರ್ತೆ: 17/NOV/2023

68 ಸಾವಿರ ದಂಡ ಪಾವತಿಸಿದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ದೀಪಾವಳಿ ಮನೆಯ ದೀಪಾಲಂಕಾರಕ್ಕೆ ಅನುಮತಿ ಪಡೆಯದೇ ವಿದ್ಯುತ್‌ ಪಡೆದಿದ್ದಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಬೆಸ್ಕಾಂ 68 ಸಾವಿರ ರೂ. ದಂಡ ವಿಧಿಸಿದೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 71 ಯೂನಿಟ್‌ ವಿದ್ಯುತ್‌ಗೆ 3 ಪಟ್ಟು ದಂಡ ವಿಧಿಸಿದ್ದಾರೆ. ಒಟ್ಟು 2,526 ರೂಪಾಯಿ ದಂಡ ಹಾಕಬೇಕಿತ್ತು. ಆದರೆ ನನ್ನ ಮನೆಗೆ ತೆಗೆದುಕೊಂಡಿರುವ 33 kV ವಿದ್ಯುತ್‌ ಬಳಕೆ ಸೇರಿ 68,526 ರೂ. ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ವಿಧಿಸಿದ ದಂಡವನ್ನು ನಾನು ಪಾವತಿ ಮಾಡಿದ್ದೇನೆ. ವಿದ್ಯುತ್‌ ಬಿಲ್‌ನಲ್ಲಿ ಲೋಪ ಇರುವ ಹಿನ್ನೆಲೆಯಲ್ಲಿ ನಿಮ್ಮ ನಿಯಮ ಏನಿದೆ? ನಿಯಮದ ಲೆಕ್ಕಾಚಾರದಲ್ಲಿ ಪರಿಶೀಲನೆ ಮಾಡಿ ಎಂದು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ನನ್ನನ್ನ ಕಳ್ಳ ಕಳ್ಳ ಎಂದು ಕರೆಯುತ್ತಾರೆ. ಆದರೆ ಲುಲು ಮಾಲ್ 6 ತಿಂಗಳು ಬಿಲ್ ಪಾವತಿಸಿಲ್ಲ. ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದಕ್ಕೆ ಬಿಲ್ ಹಾಕ್ತಾರಾ? ನನ್ನನ್ನು ಕಳ್ಳ ಎಂದು ಹೇಳುವುದನ್ನು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ನಾನು ದಂಡ ಕಟ್ಟಿದ್ದೇನೆ. ನೀವು ಲುಲು ಮಾಲ್ ಕರೆಂಟ್ ಕಳ್ಳತನದ ಬಗ್ಗೆ ತನಿಖೆಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಸವಾಲು ಎಸೆದರು.

ಮೇಕೆದಾಟು ಪಾದಯಾತ್ರೆಗೆ ಯಾವ ಕರೆಂಟ್ ತಗೊಂಡಿದ್ದೀರಿ. ಕನಕಪುರದಲ್ಲಿ ಕನಕೋತ್ಸವ ನಡೆಯುತ್ತದೆ. ಅದಕ್ಕೆ ಕರೆಂಟ್ ಎಲ್ಲಿಂದ ಬಂತು? ಯಾರು ದೊಡ್ಡ ಕಳ್ಳ? ಹೇಗೆ ಮಾಡಿದರೂ ಉತ್ತರ ಕೊಡಬೇಕು. ಎಲ್ಲವೂ ಕಣ್ಣ ಮುಂದೆ ಇದೆ. ಬೇಕಿದ್ರೆ ವಿಡಿಯೋ ಕೊಡೋಣ. ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.