ಡೈಲಿ ವಾರ್ತೆ: 19/NOV/2023

ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ದೂರು ದಾಖಲು.

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಎಚ್. ವಿರುದ್ಧ ದೂರು ದಾಖಲಾಗಿದೆ.

ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆ ಫೌಝಿಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಎಚ್. ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದು ನ್ಯಾಯಾಲಯದ ಡಿಸ್ ಸಂಖ್ಯೆ 1595/2023 ರಂತೆ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.

ಪಂಚಾಯತ್ ನ 8 ಮಂದಿ ಸದಸ್ಯರಿಗೆ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅವರು ಅನ್ಯಾಯ ನಡೆಸಿರುವುದನ್ನು ಖಂಡಿಸಿ 8 ಮಂದಿ ಸದಸ್ಯರು ಅಕ್ಟೋಬರ್ 30 ರಂದು ಪಂಚಾಯತ್ ಮುಂಬಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಸ್ಥಳಕ್ಕೆ ಬಂದು ಏಕಾಏಕಿ ದರ್ಪವನ್ನು ತೋರಿಸಿ, ಮಹಿಳೆ ಎಂಬುದನ್ನೂ ಲೆಕ್ಕಿಸದೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿ ಅಗೌರವ ತೋರಿಸಿದ್ದಾರೆ. ಈ ಕೃತ್ಯ ಎಸಗಿದ ಲಕ್ಷ್ಮಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಫೌಝಿಯಾ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ
ಎಂಟು ಮಂದಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬುಬಕ್ಕರ್ ಸಿದ್ದೀಕ್, ಜಮಾಲುದ್ದೀನ್, ಫಾತಿಮಾ ಸೌನ್, ಪೌಝಿಯಾ, ಸಬೀನಾ, ರಝಿಯಾ, ಸಾಜಿದ್, ವಹಿದಾ ಬಾನು ಇವರ ವಿರುದ್ಧವೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅ.30 ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದರು.