ಡೈಲಿ ವಾರ್ತೆ: 20/NOV/2023
ರಾಜ್ಯ ಸರ್ಕಾರದ ಹಿಂದೂ ಧಮನಿ ನೀತಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಪ್ರತಿಭಟನೆ
ಬಂಟ್ವಾಳ : ವಿಶ್ವ ಹಿಂದೂ ಪರಿಷತ್, ಭಜರಂಗದಳ, ಬಂಟ್ವಾಳ ಪ್ರಖಂಡದ ವತಿಯಿಂದ ರಾಜ್ಯ ಸರ್ಕಾರದ ಹಿಂದೂ ಧಮನಿ ನೀತಿಯನ್ನು ಖಂಡಿಸಿ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಂಗಳೂರು ವಿಭಾಗದ ವಿಶ್ವಹಿಂದೂ ಪರಿಷತ್‌ನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರಕಾರ ನಿರಂತರವಾಗಿ ಹಿಂದೂ ದಮನ ನೀತಿಯನ್ನು ಅನುಸರಿಸುತ್ತಿದ್ದು, ಇತ್ತೀಚೆಗೆ ಪುತ್ತೂರು, ಸುಳ್ಯಗಳಲ್ಲಿ ಭಜರಂಗದಳದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿರುತ್ತದೆ, ಅಪ್ರಾಪ್ತ ಹಿಂದೂ ಹುಡುಗಿಯನ್ನು ಅನ್ಯ ಮತೀಯರು ವಂಚನೆ ಮಾಡಿ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಹುಡುಗಿಯನ್ನು ರಕ್ಷಣೆ ಮಾಡಿದ್ದಲ್ಲದೇ, ರಕ್ಷಿಸಲ್ಪಟ್ಟ ಹುಡುಗಿ ನೀಡಿದ ದೂರಿನಂತೆ ಅನ್ಯ ಮತೀಯ ವಂಚಕನ ವಿರುದ್ಧ ಕೇಸು ದಾಖಲಾಗಿ ಜೈಲು ಪಾಲಾಗಿರುತ್ತಾನೆ. ಈ ಘಟನೆಯನ್ನು ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆನ್ನುವ ಹುಡುಗರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದ್ದು, ಆ ಒಂದು ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಕಾರ್ಯಕರ್ತರಲ್ಲಿ ಗಡಿಪಾರು ಮಾಡುವ ನೋಟೀಸನ್ನು ನೀಡಿ ಹಿಂದೂ ಕೆಲಸವನ್ನು ದಮನ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ಪಿ ಮಾತನಾಡಿ ಸರಕಾರ ಪೋಲೀಸರ ಮೂಲಕ ಹಿಂದೂ ವಿರೋಧಿ ಕೃತ್ಯವನ್ನು ಮಾಡಿಸುತ್ತಿದ್ದು, ಗಡಿಪಾರು ನೋಟೀಸನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಸಂಯೋಜಕ ಭರತ್ ಕುಡ್ಮೇಲು, ಜಿಲ್ಲಾ ಉಪಾಧ್ಯಕ್ಷ ಗುರುರಾಜ ಬಂಟ್ವಾಳ, ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಜಿಲ್ಲಾ ಸಾಮರಸ್ಯ ಪ್ರಮುಖ್ ಸುರೇಶ್ ಬೆಂಜನಪದವು ಮತ್ತು ಬಂಟ್ವಾಳ ಪ್ರಖಂಡದ ದೀಪಕ್ ಅಜೆಕಳ, ಚಂದ್ರ ಕಲಾಯಿ, ಸಂದೇಶ್ ಕಾಡಬೆಟ್ಟು, ಪ್ರಶಾಂತ್ ಕೊಟ್ಟಾರಿ, ಪ್ರವೀಣ ಕುಂಟಾಲಪಲ್ಕೆ, ಅಭಿನ್ ರೈ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ತಹಶೀಲ್ದಾರ್‌ರವರ ಮೂಲಕ ಸರಕಾರದ ಗಮನಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಂಟ್ವಾಳ ರವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಸಂತೋಷ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.