ಡೈಲಿ ವಾರ್ತೆ: 20/NOV/2023
ವರದಿ: ವಿದ್ಯಾಧರ ಮೊರಬಾ
ಅಂಗನವಾಡಿ ಕೇಂದ್ರಗಳೇ ಕನ್ನಡ ಭಾಷೆಗೆ ಅಡಿಪಾಯ :ಗೋಪಾಲಕೃಷ್ಣ ನಾಯಕ
ಅಂಕೋಲಾ : ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳೇ ಕನ್ನಡ ಭಾಷೆಯ ಕಲಿಕೆಗೆ ಭದ್ರವಾದ ಅಡಿಪಾ ಯವನ್ನು ಹಾಕಿಕೊಡುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ತಾಲೂಕ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ) ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೊತ್ಸವದ ಅಂಗವಾಗಿ ತಾಲೂಕಿನ ಬೆಳಸೆ ಅಂಗನವಾಡಿ ಕೇಂದ್ರ ದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಕನ್ನಡ ಕಾರ್ತಿಕ ಅನುದಿನ-ಅನುಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿಗಳಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವದನ್ನು, ಹಾಡುವದನ್ನು ಕಲಿಸಲಾಗುತ್ತದೆ. ಅದರ ಪ್ರಭಾವ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಯ ಕಲಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕಾರ್ಯವನ್ನು ಮರೆಯುವಂತಿಲ್ಲ. ಈ ಕಾರಣಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ಚಿಣ್ಣರಂಗಳದಲ್ಲಿ ಸಾಹಿತ್ಯ ಪರಿಷತ್ತು ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಡಿಪಿಓ ಸವಿತಾ ಶಾಸ್ತ್ರಿಮಠ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂಗನವಾಡಿ ಮಕ್ಕಳಿಗಾಗಿ ಕಾರ್ಯಕ್ರಮ ನಡೆಸಿರುವದು ಶ್ಲಾಘನೀಯ. ಇದರಿಂದ ಅಂಗನವಾಡಿ ಕೇಂದ್ರಗಳಿಗೂ ಕನ್ನಡ ಮಾದ್ಯಮದ ಸರ್ಕಾರಿ ಶಾಲೆಗಳಿಗೂ ಉತ್ತೇಜನ ನೀಡಿದಂತಾಗುತ್ತದೆ. ನಮ್ಮ ಇಲಾಖೆಯಿಂದ ಮಕ್ಕಳಿಗೆ ಅನೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಡಾ.ಕರುಣಾಕರ ನಾಯ್ಕ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ನೋಡಿದರೆ ಅಂಗನ ವಾಡಿ ಮಕ್ಕಳು ಯಾವ ಕಾನ್ವೆಂಟ ಮಕ್ಕಳಿಗೂ ಕಡಿಮೆ ಎಲ್ಲ ಎನ್ನುವದು ತಿಳಿಯುವ ಮೂಲಕ ಈ ಕಾರ್ಯಕ್ರಮ ಅತ್ಯಂತ ಖುಷಿ ನೀಡಿದೆ ಎಂದರು. ಬಹುಮಾನ ಪ್ರಾಯೋಜಕರಾದ ಲಯನ್ ಸಂಜಯ ಆರುಂಧೇಕರ, ಬೆಳಸೆ ಗ್ರಾಪಂ.ಅಧ್ಯಕ್ಷೆ ಶೋಭಾ ಬೀರಣ್ಣ ನಾಯಕ ಮಾತನಾಡಿದರು. ಪಿಡಿಓ ನೀಲಕಂಠ ನಾಯಕ, ನಿವೃತ್ತ ಶಿಕ್ಷಕ ಗಣಪತಿ ಗಾಂವಕರ ಉಪಸ್ಥಿತರಿದ್ದರು.
ಕಸಾಪ ಹಿರಿಯ ಸದಸ್ಯ ಮಹಾಂತೇಶ ರೇವಡಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಗೌರವ ಕಾರ್ಯ ದರ್ಶಿ ಜಗದೀಶ ಜಿ.ನಾಯಕ ಹೊಸ್ಕೇರಿ, ನಿವೃತ್ತ ಶಿಕ್ಷಕ ರಫೀಕ ಶೇಖ, ಭಾವನಾ ಆರ್.ನಾಯಕ ನಿರ್ವಹಿ ಸಿದರು. ಸ್ಪರ್ಧೆಯ ನಿರ್ಣಯಕರಾಗಿ ನಿವೃತ್ತ ಶಿಕ್ಷಕ ರಫೀಕ ಶೇಖ, ಪತ್ರಕರ್ತ ನಾಗರಾಜ ಜಾಂಬಳೇಕರ ನಿರ್ವಹಿಸಿದರು.
ವಿವಿಧ ಸ್ಪರ್ಧೆ : ಅಂಗನವಾಡಿ ಮಕ್ಕಳಿಗಾಗಿ ಕಪ್ಪೆ ಜಿಗಿತ, ಲಿಂಬೂ ಓಟ, ಸಂಗೀತ ಖುರ್ಚಿ ಮುಂತಾದ ಮನರಂಜನಾ ಕ್ರೀಡೆಗಳನ್ನು, ಛದ್ಮವೇಷ, ಏಕ ಪಾತ್ರಾಭಿನಯ, ನೃತ್ಯ ಹಾಡು ಮುಂತಾದ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯ ಕರ್ತರು, ಮಕ್ಕಳ ಪಾಲಕರು ಉಪಸ್ಥಿತರಿದ್ದರು.