ಡೈಲಿ ವಾರ್ತೆ: 23/NOV/2023

ಅಗ್ರಾರ್ ಹೋಲಿ ಕ್ಸೇವಿಯರ್ ಚರ್ಚ್ ನಲ್ಲಿ ಆಲ್ಬರ್ಟ್ ವಲೇರಿಯನ್ ರೋಡ್ರಿಗಸ್ ರವರ ಅಂತಿಮ ಕ್ರಿಯೆ!

ಬಂಟ್ವಾಳ : ಬಂಟ್ವಾಳ ಸಮೀಪದ ಅಗ್ರಾರ್ – ಪೊನ್ನಂಗಿಲ ನಿವಾಸಿ ಆಲ್ಬರ್ಟ್ ವಲೇರಿಯನ್ ರೋಡ್ರಿಗಸ್ ಅವರ ಅಂತಿಮ ಕ್ರಿಯೆಯು ಅಗ್ರಾರ್ ಹೋಲಿ ಕ್ಸೇವಿಯರ್ ಚರ್ಚ್ ನಲ್ಲಿ ಗುರುವಾರ ಸಂಜೆ ಬಲಿಪೂಜೆ ಯೊಂದಿಗೆ ನಡೆಯಿತು.

ಉಡುಪಿ ಜಿಲ್ಲಾ ಧರ್ಮಪ್ರಾಂತ್ಯದ ಬಿಷಪ್ ರೆ.ಫಾ.ಜೆರಾಲ್ಡ್ ಐಸಾಕ್ ಲೋಬೋ, ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ರೆ.ಫಾ. ಎಲೋಸಿಯಸ್ ಪಾವ್ಲ್ ಡಿ.ಸೋಜ, ಅಗ್ರಾರ್ ಚರ್ಚ್ ನ ಧರ್ಮಗುರು ರೆ.ಫಾ. ಪೀಟರ್ ಡಿ.ಸೋಜಾ, ಮೃತರ ಸಹೋದರ ರೆ.ಫಾ. ಇಲಿಯಾಸ್ ರೋಡ್ರಿಗಸ್ ಹಾಗೂ ಸುಮಾರು 25 ಕ್ಕೂ ಅಧಿಕ ಧರ್ಮ ಗುರುಗಳು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ಆಲ್ಬರ್ಟ್ ವಲೇರಿಯನ್ ರೋಡ್ರಿಗಸ್ (87) ನ.21 ರಂದು ಮಂಗಳವಾರ ವಯೋ ಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದರು. ಅವರ ಪುತ್ರಿ ವಿದೇಶದಲ್ಲಿದ್ದು ಅವರು ಬಂದು ಅಂತಿಮ ದರ್ಶನ ಪಡೆಯುವ ಸಲುವಾಗಿ ಅಂತಿಮ ಕ್ರಿಯೆ ಗುರುವಾರ ನೆರವೇರಿಸಲಾಯಿತು

ಅಗ್ರಾರ್ ಚರ್ಚಿನ ಪಾಲನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ, ಪತ್ನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ವೇಳೆ ಮಾಜಿ ಸಚಿವ, ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ನ್ಯಾಯವಾದಿ,ನೋಟರಿ ರೋಲ್ಫ್ ಅಲೆಕ್ಸ್ ಸಿಕ್ವೇರಾ, ಪ್ರಮುಖರಾದ ಅರುಣ್ ಕುವೆಲ್ಲೊ, ಕೆ ಪದ್ಮನಾಭ ರೈ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ಅಲ್ಬರ್ಟ್ ಮಿನೇಜಸ್, ಸಿರಾಜ್ ಮದಕ ಸಹಿತ ಹಲವು ಗಣ್ಯರು ಭಾಗವಹಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದರು.