ಡೈಲಿ ವಾರ್ತೆ: 29/NOV/2023

ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಎಸ್.ವಿಜಯಪ್ರಸಾದ್ ಕರ್ತವ್ಯಕ್ಕೆ ಹಾಜರ್

ಬಂಟ್ವಾಳ, ನ. 29 : ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಎಸ್.ವಿಜಯ ಪ್ರಸಾದ್ ಅವರು ಮಂಗಳವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಂಟ್ವಾಳ ಡಿ.ವೈ.ಎಸ್.ಪಿ. ಯಾಗಿದ್ದ ಪ್ರತಾಪ್ ಸಿಂಗ್ ಥೋರಾಟ್ ಅವರು ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ವಿಜಯ ಪ್ರಸಾದ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು.

ವಿಜಯ ಪ್ರಸಾದ್ ಅವರು ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮವಾಗಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಮುಖ ಮತ್ತು ಸೂಕ್ಷ್ಮ , ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಡಿ.ವೈ.ಎಸ್.ಯಾಗಿ ಭಡ್ತಿ ಹೊಂದಿದ ಮೇಲೆ ಅವರು ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಾರ್ಕಳ ತಾಲೂಕಿನಲ್ಲಿ ಡಿ.ವೈ.ಎಸ್.ಪಿ.ಯಾಗಿ ಕೆಲಸ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇವರನ್ನು ಚುನಾವಣಾ ನಿಯಮದಂತೆ ಕಾರವಾರ ಜಿಲ್ಲೆಗೆ ವರ್ಗಾವಣೆಗೊಳಿಸಲಾಗಿತ್ತು.
ಚುನಾವಣೆ ಮುಗಿದಬಳಿಕ ರಾಜ್ಯ ಸರಕಾರದ ಆದೇಶದಂತೆ ಇವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.
ಹಲವಾರು ವರ್ಷಗಳ ಹಿಂದೆ ದ.ಕ.ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ಉಪ ವಿಭಾಗವಾಗಿ ಹೊಸದಾಗಿ ಸೃಜನೆಗೊಂಡ ಪೋಲೀಸ್ ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾಭ್ಯಾಸ ಮಾಡಿದ್ದರು.