ಡೈಲಿ ವಾರ್ತೆ: 30/NOV/2023
ಬೆಂಗಳೂರು: ಮಕ್ಕಳ ಮಾರಾಟ ಪ್ರಕರಣ – ತರಕಾರಿ ಮಾರುತ್ತಲೇ ಡೀಲ್ ಮಾಡುತ್ತಿದ್ದ ಮಹಿಳೆ.!
ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ ಎಂಬಾಕೆ ತರಕಾರಿ ಮಾರಾಟ ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಮಹಾಲಕ್ಷ್ಮಿ ಹಸುಗೂಸುಗಳನ್ನು ಮಾರಾಟ ಮಾಡಿ ಲಕ್ಷಲಕ್ಷ ದುಡ್ಡು ಮಾಡಿದ್ದರೂ ಬಡವರು ಎನ್ನುವಂತಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ತರಕಾರಿ ಮಾರುತ್ತಿದ್ದ ಈಕೆ, ತರಕಾರಿ ಮಾರಾಟ ಮಾಡುತ್ತಲೇ ಹಲವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು.
ಬಳಿಕ ಅವರ ನಂಬರ್ ಪಡೆದು ಪ್ರತಿನಿತ್ಯ ಮಾತನಾಡಲು ಶುರುಮಾಡುತ್ತಿದ್ದಳು. ನಂತರ ಮಕ್ಕಳು ಬೇಕು ಎಂದವರಿಗೆ ನನಗೆ ಪರಿಚಯ ಇರುವವರ ಬಳಿ ಸಿಗುತ್ತದೆ ಎಂದು ಹೇಳಿ ಅವರು ಓಕೆ ಅಂದರೆ ಆರೋಪಿಗಳ ಪೈಕಿ ತಮಿಳುನಾಡಿನ ರಾಧಾಳಿಗೆ ಕರೆ ಮಾಡುತ್ತಿದ್ದಳು. ಅಲ್ಲಿಂದ ಮಕ್ಕಳ ಫೋಟೋಗಳನ್ನು ಕಳುಹಿಸಿಕೊಂಡು ಮಹಾಲಕ್ಷ್ಮಿ ಡೀಲ್ ಮಾಡುತ್ತಿದ್ದು, ತರಕಾರಿ ಮಾರುತ್ತಲೇ ಗಾಳ ಹಾಕುತ್ತಿದ್ದಳು.
ಇದೀಗ ಮಕ್ಕಳ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅದರಲ್ಲಿ ಕರ್ನಾಟಕದ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದುವರೆಗೆ 10 ಮಕ್ಕಳ ಬಗ್ಗೆ ಮಾತ್ರ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು, ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.