*ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಕ್ರೀಡಾಕೂಟದ ಸಮಾರೋಪ* ಬಂಟ್ವಾಳ : ಇಂದಿನ ವಿದ್ಯಾರ್ಥಿಗಳು ಕೇವಲ ವಾರ್ಷಿಕ ಕ್ರೀಡಾ ಚಟುವಟಿಕೆಗಳ ಅಂಗವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಕಂಡು ಬರುತ್ತಿದೆ. ಇದರ ಹೊರತಾದ ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವಲ್ಲಿ ನಿರಾಸಕ್ತಿ ತೋರಿಸುತ್ತಾರೆ. ಕ್ರೀಡೋತ್ಸವದ ಹೊರತಾದ ದಿನಗಳಲ್ಲೂ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಇರಬೇಕು. ಕ್ರೀಡೆ ಎನ್ನುವುದು ದೈಹಿಕ ಮತ್ತು ಮಾನಸಿಕ ಸದೃಢತೆ ಸಹಾಯಕವಾಗಿದೆ. ಅದು ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸಿ ಮತ್ತು ಶಿಸ್ತನ್ನು ರೂಪಿಸುತ್ತದೆ ಎಂದು ಕುದ್ರೋಳಿ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಣುಕಾ ಅರುಣ್ ಹೇಳಿದರು. ಅವರು ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ 35ನೇ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ಕ್ರೀಡಾಪಟುಗಳನ್ನು ಗೌರವಿಸಿ, ತುಂಬೆ ವಿದ್ಯಾ ಸಂಸ್ಥೆಗಳ ಶಿಸ್ತುಬದ್ಧ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ ಮಾತನಾಡುತ್ತಾ, ನಮಗೆ ಆರೋಗ್ಯ ಇದ್ದರೆ ಎಲ್ಲವೂ ಸಾಧ್ಯ ಈ ನಿಟ್ಟಿನಲ್ಲಿ ಇಂದು ಕಲಿತ ಕ್ರೀಡಾ ಚಟುವಟಿಕೆಗಳು ಪೂರಕವಾಗುವುದಲ್ಲದೆ, ನಿತ್ಯ ಜೀವನದಲ್ಲಿ ದಿನಕ್ಕೆ ಕನಿಷ್ಠ ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಗಳನ್ನು ರೂಡಿಸಿಕೊಳ್ಳಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಿ.ಟಿ.ಎ. ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು ಮಾತನಾಡಿ, ದಿವಂಗತ ಅಹ್ಮದ್ ಹಾಜಿ ಮುಹಿಯುದ್ದೀನ್‍ರವರ ದೂರದೃಷ್ಠಿಯಲ್ಲಿ ವಿದ್ಯಾ ಸಂಸ್ಥೆಗಳು ಅತ್ಯಂತ ಸಮರ್ಪಕವಾಗಿ ಮುಂದುವರಿಯುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು. ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಬಿ.ಎಂ. ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಫಾತಿಮಾ ಸಾನಿಯಾ ಅಶ್ರಫ್ ಹಾಗೂ ಪಿ.ಟಿ.ಎ. ನಿಕಟಪೂರ್ವ ಅಧ್ಯಕ್ಷ ಬಶೀರ್ ತಂಡೇಲ್ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಕವಾಯತು ಪ್ರದರ್ಶನವನ್ನು ನಿರ್ದೇಶನ ಮಾಡಿದರು. ಇದೇ ವೇಳೆ ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಿ ಹುತಾತ್ಮರಾದ ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್‍ಗೆ ಮೌನ ಪ್ರಾರ್ಥನೆಯ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ., ಶಾಹಿಲ್ ಪುದು, ಶಾಫಿ ಅಮೆಮಾರ್, ನಝೀರ್ ಕುಂಜತ್ಕಳ, ಮ್ಯಾಕ್ಸಿಂ ಕುವೆಲ್ಲೊ, ಮೋಹಿನಿ ಸುವರ್ಣ, ತುಂಬೆ ವಿದ್ಯಾ ಸಂಸ್ಥೆಗಳ ಮ್ಯಾನೇಜರ್ ಅಬ್ದುಲ್ ಕಬೀರ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವಸ್ ಮುಂತಾದವರು ಉಪಸ್ಥಿತರಿದ್ದರು. ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಾಯಿರಾಂ ಜೆ. ನಾಯಕ್ ವಂದಿಸಿ, ಜೀವಶಾಸ್ತ್ರ ಉಪನ್ಯಾಸಕಿ ನೀತಾಶ್ರೀ ನಿರೂಪಿಸಿದರು.