ಡೈಲಿ ವಾರ್ತೆ: 04/DEC/2023
ಮದವೇರಿದ ಕಾಡಾನೆ ದಾಳಿ – ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು, ಕುಸಿದು ಬಿದ್ದ ಮಾವುತ
ಹಾಸನ: 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳೊಂದಿಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯೊಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ 3 ಸಾಕಾನೆಗಳು ಹಿಮ್ಮೆಟ್ಟಿವೆ. ಆನೆಗಳು ಕಾದಾಡಲು ಪ್ರಾರಂಭಿಸುತ್ತಿದ್ದಂತೆ ಮಾವುತ ಕೂಡಾ ಇಳಿದು ದೂರ ಓಡಿದ್ದಾರೆ
ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಅರ್ಜುನ ಪ್ರತಿರೋಧ ತೋರದೇ ಹೋಗಿದ್ದರೆ ಇತರ ಆನೆಗಳು ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಜೀವಕ್ಕೆ ಕುತ್ತಾಗುತ್ತಿತ್ತು. ಕೊಂಚ ಯಡವಟ್ಟಾಗಿದ್ದರೂ ಕೂಡ ಹಲವು ಸಿಬ್ಬಂದಿಯ ಪ್ರಾಣಕ್ಕೆ ಅಪಾಯವಿರುತ್ತಿತ್ತು. ಅದೃಷ್ಟವಶಾತ್ ಅರ್ಜುನ ಕಾಡಾನೆ ಜೊತೆ ಕಾಳಗಕ್ಕೆ ನಿಂತಿದ್ದರಿಂದ ದುರಂತ ತಪ್ಪಿದೆ. ತನ್ನ ಪ್ರಾಣ ತ್ಯಾಗ ಮಾಡಿ ಅರ್ಜುನ ಹಲವರ ಜೀವ ಉಳಿಸಿದ್ದಾನೆ. ಮದಗಜಗಳ ಕಾಳಗದಲ್ಲಿ ಅರ್ಜುನ ವೀರಮರಣ ಹೊಂದಿದ್ದಾನೆ.
ಕಾರ್ಯಾಚರಣೆ ಸ್ಥಗಿತ:
ಕಾಡಾನೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅರ್ಜುನನಿಗೆ ತಿವಿದು ಪ್ರಾಣ ಬಿಟ್ಟರೂ ಕೂಡಾ ಹಂತಕ ಆನೆ ಮಾತ್ರ ಬಹಳ ಹೊತ್ತಿನವರೆಗೂ ಅಲ್ಲೇ ಇತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಇವೆಲ್ಲವನ್ನೂ ದೂರದಲ್ಲೇ ನಿಂತು ನೋಡಬೇಕಾಯಿತು.
ಕುಸಿದು ಬಿದ್ದ ಮಾವುತ:
ಕಾಡಾನೆ ದಾಳಿಯಿಂದ ಅರ್ಜುನ ಕಣ್ಮುಚ್ಚಿದ ಸುದ್ದಿ ಕೇಳಿ ಅಕ್ಕರೆಯಿಂದ ನೋಡಿಕೊಂಡಿದ್ದ ಮಾವುತ ವಿನು ನೋವಿನಿಂದ ಕುಸಿದು ಬಿದ್ದಿದ್ದರು. ಮದಗಜದ ಜೊತೆ ಅರ್ಜುನ ಕಾದಾಡುವಾಗ ಮಾವುತ ವಿನು ಆನೆ ಮೇಲಿಂದ ಇಳಿದು ಬಂದಿದ್ದರು. ವಿನುವಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನನ ಸಾವಿನ ಸುದ್ದಿಯನ್ನು ಇಲಾಖೆ ಸಿಬ್ಬಂದಿ ಮೊದಲಿಗೆ ತಿಳಿಸಿರಲಿಲ್ಲ. ಆನಂತರ ಮಾವುತ ವಿನುಗೆ ತನ್ನ ಪ್ರೀತಿಯ ಅರ್ಜುನನ ಸಾವಿನ ವಿಚಾರವನ್ನು ತಿಳಿಸಲಾಗಿತ್ತು. ಈ ವೇಳೆ ವಿನು ಕಣ್ಣೀರಿಡುತ್ತಲೇ ಉಳಿದ ಸಾಕಾನೆಗಳೊಂದಿಗೆ ಬಂದಿದ್ದರು. ದಾರಿ ಮಧ್ಯೆ ವಿನು ಅರ್ಜುನನ ಸಾವಿನ ನೋವು ತಡೆಯಲಾರದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ 108 ಅಂಬುಲೆನ್ಸ್ ಮೂಲಕ ಮಾವುತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.