ಡೈಲಿ ವಾರ್ತೆ: 04/DEC/2023

ಬೆಂಜನಪದವು : ಇಸ್ಕಾನ್ ಅಕ್ಷಯ ಪಾತ್ರ ಪ್ರತಿಷ್ಠಾನದಿಂದ ಅತ್ಯಾಧುನಿಕ ಅಡುಗೆ ಕೇಂದ್ರ ಲೋಕಾರ್ಪಣೆ.

ಬಂಟ್ವಾಳ, ಡಿ.4 : ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಇಸ್ಕಾನ್ ಅಕ್ಷಯ ಪಾತ್ರ ಪ್ರತಿಷ್ಠಾನ ಮೂಲಕ ಪೌಷ್ಠಿಕ ಮತ್ತು ಸಾತ್ವಿಕ ಆಹಾರ ಸಿದ್ಧಪಡಿಸಿ ಮಕ್ಕಳ ಹಸಿವು ನೀಗಿಸುವುದರ ಜೊತೆಗೆ ಅವರ ಶಾರೀರಿಕ ಮತ್ತು ಭೌದ್ಧಿಕ ಶಕ್ತಿ ವೃದ್ಧಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬೆಂಜನಪದವಿನಲ್ಲಿ ಇಸ್ಕಾನ್ ಅಕ್ಷಯ ಪಾತ್ರ ಪ್ರತಿಷ್ಠಾನ ವತಿಯಿಂದ ನಿರ್ಮಾಣಗೊಂಡ 25 ಸಾವಿರ ಮಂದಿಗೆ ಏಕ ಕಾಲದಲ್ಲಿ ಅಡುಗೆ ತಯಾರಿಸುವ ಮಂಗಳೂರು ಕೇಂದ್ರೀಕೃತ ಅತ್ಯಾಧುನಿಕ ಅಡುಗೆ ಕೋಣೆ ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅನ್ನಬ್ರಹ್ಮನ ಪೂಜೆಯ ಪ್ರಮುಖ ಅಂಗ ಅಕ್ಷಯ ಪಾತ್ರ. ಮಕ್ಕಳಲ್ಲಿ ಆಧ್ಯಾತ್ಮಿಕ ಸಾಧನೆಗೆ ಪ್ರೇರಣೆ ನೀಡುವ ಅಕ್ಷಯ ಪಾತ್ರ ಪ್ರತಿಷ್ಠಾನ ಪ್ರಪಂಚದ ಎಲ್ಲೆಡೆ ಕೃಷ್ಣನ ಪ್ರಸಾದ ನೀಡುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ್ ದಾಸ ಮಾತನಾಡಿ, ದೇಶದಲ್ಲಿ ಈಗಾಗಲೇ 69 ಅತ್ಯಾಧುನಿಕ ಅಡುಗೆ ಕೋಣೆಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು 23 ಲಕ್ಷ ಮಂದಿ ವಿದ್ಯಾರ್ಥಿಗಳು ಪ್ರತಿದಿನ ಸವಿಯುತ್ತಿದ್ದಾರೆ. ಇಲ್ಲಿನ ಪರಿಸರ ಸ್ನೇಹಿ ಅಡುಗೆ ಕೊಣೆಯಲ್ಲಿ ಸಿದ್ಧಪಡಿಸಿದ ಆಹಾರ 124 ಸರ್ಕಾರಿ ಮತ್ತು 41 ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಒಟ್ಟು 165 ಕ್ಕೂ ಹೆಚ್ಚು ಶಾಲೆಗಗಳಿಗೆ ಪೂರೈಕೆಯಾಗಲಿದೆ ಎಂದರು.

ಮೇರಮಜಲು ಗ್ರಾಮ ಪಂಚಾಯಿತ್ ಅಧ್ಯಕ್ಷ ಸತೀಶ ನಾಯಕ್, ಅಮ್ಮುಂಜೆ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಶುಭ ಹಾರೈಸಿದರು.

ಕೊಡಚಾದ್ರಿ ಗುರುಕುಲದ ಉಸ್ತುವಾರಿ ತತ್ವದರ್ಶನ ದಾಸ, ಪ್ರಮುಖರಾದ ಸುದರ್ಶನ ಪ್ರಭು, ನತಪಂಡಿತ ಪ್ರಭು, ಮಧುಪಂಡಿತ ದಾಸ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಅರ್ಹ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ಮಂಗಳೂರು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ್ ಸ್ವಾಗತಿಸಿ, ಪ್ರತಿಷ್ಠಾನ ಉಪಾಧ್ಯಕ್ಷ ಚಂಚಲಪತಿ ದಾಸ ಪ್ರಾಸ್ತಾವಿಕ ಮಾತನಾಡಿದರು. ನನಂದನ ದಾಸ ವಂದಿಸಿ, ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.